ರಾಮನಗರ: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ.
ಡಿ.ಕೆ. ಸುರೇಶ್ ಪರ ವಕೀಲ ಪ್ರದೀಪ್ ಎಂಬುವರು ರಾಮನಗರದ ಸಿಇಎನ್ ಪೊಲೀಸ್ ಠಾಣೆಗೆ ಮಹಿಳೆ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ pavitrah256 ಎಂಬ ಹೆಸರಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಮಹಿಳೆ, ಏ.8ರಂದು ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಸುರೇಶ್ ಅವರ ಚಿತ್ರದೊಂದಿಗೆ ತನ್ನ ಚಿತ್ರ ಜೋಡಿಸಿ ಎಡಿಟ್ ಮಾಡಿದ ಚಿತ್ರವನ್ನು ಸಹ ಹಾಕಿಕೊಂಡಿದ್ದಾರೆ. ಪತಿ ಹೆಸರಿನ ಮುಂದೆ ಡಿ.ಕೆ. ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದಾರೆ.
ವಿಡಿಯೊದಲ್ಲೇನಿದೆ?: ‘ನಾನು ಮೊದಲು ಡಿ.ಕೆ. ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಎಂ.ಪಿ.ಯಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ’ ಎಂದು ಆಕೆ ವಿಡಿಯೊದಲ್ಲಿ ಹೇಳಿದ್ದಾರೆ.
ದೂರಿನಲ್ಲೇನಿದೆ?: ಸುರೇಶ್ ಅವರ ಪತ್ನಿ ಎಂದು ದುರುದ್ದೇಶದಿಂದ ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆ ಸಹ ದುರುಪಯೋಗಪಡಿಸಿ ಕೊಂಡಿದ್ದಾರೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಕೀಲ ಪ್ರದೀಪ್ ತಿಳಿಸಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಮಹಿಳೆ ವಿರುದ್ದ ಭಾರತೀಯ ನ್ಯಾಯ ಸಂಹಿತೆ 237 (ಉದ್ದೇಶಪೂರ್ವಕವಾಗಿ ಸುಳ್ಳು ಘೋಷಣೆ ಮಾಡಿಕೊಳ್ಳುವ ಅಪರಾಧ), 319 (ಮತ್ತೊಬ್ಬರಂತೆ ನಟಿಸಿ ಮೋಸ ಮಾಡುವ ಅಪರಾಧ), 336 (ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸುವ ಅಪರಾಧ) ಹಾಗೂ 353 (ಸಾರ್ವಜನಿಕವಾಗಿ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಕಲಂ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.