ADVERTISEMENT

ಲಿಂಗಾನುಪಾತ ಕುಸಿತಕ್ಕೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 8:26 IST
Last Updated 9 ಮಾರ್ಚ್ 2022, 8:26 IST
ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವೈದ್ಯಾಧಿಕಾರಿ ಡಾ.ರಾಜೇಶ್‌ ಉದ್ಘಾಟಿಸಿದರು. ಡಾ.ರಫೀಕ್‌, ಡಾ.ರಾಕೇಶ್‌, ಡಾ.ಚಂದ್ರಲೇಖಾ, ಡಾ.ಹೇಮಾಶ್ರೀ, ಡಾ.ಮಂಜುಳಾ, ಡಾ.ರಶ್ಮಿ, ಡಾ.ಯಶವಂತ್‌, ಡಾ.ಫಾರೂಕ್‌ ಹಾಗೂ ಶುಶ್ರೂಷಕಿಯರು ಇದ್ದರು
ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವೈದ್ಯಾಧಿಕಾರಿ ಡಾ.ರಾಜೇಶ್‌ ಉದ್ಘಾಟಿಸಿದರು. ಡಾ.ರಫೀಕ್‌, ಡಾ.ರಾಕೇಶ್‌, ಡಾ.ಚಂದ್ರಲೇಖಾ, ಡಾ.ಹೇಮಾಶ್ರೀ, ಡಾ.ಮಂಜುಳಾ, ಡಾ.ರಶ್ಮಿ, ಡಾ.ಯಶವಂತ್‌, ಡಾ.ಫಾರೂಕ್‌ ಹಾಗೂ ಶುಶ್ರೂಷಕಿಯರು ಇದ್ದರು   

ಮಾಗಡಿ: ‘ಮಹಿಳೆ ಸಮಾಜದ ಕಣ್ಣು. ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ’ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್‌ ಬಣ್ಣಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವೈಜ್ಞಾನಿಕ ಯುಗದಲ್ಲಿ ಮಹಿಳೆ ಎಲ್ಲಾ ರಂಗದಲ್ಲೂ ವಿಶೇಷ ಛಾಪು ಮೂಡಿಸುತ್ತಿದ್ದಾಳೆ. ಆದರೆ, ಲಿಂಗಾನುಪಾತ ಕಡಿಮೆಯಾಗುತ್ತಿರುವುದು ವಿಷಾದನೀಯ. ಮಹಿಳೆ ತಾಯಿ, ಪತ್ನಿ, ಮಗಳು, ಸೊಸೆ ಪಾತ್ರದಲ್ಲಿ ದುಡಿಯುತ್ತಿದ್ದು, ಹುಟ್ಟಿದ ಮತ್ತು ಕೊಟ್ಟ ಮನೆಯ ನಂದಾದೀಪವಾಗಿದ್ದಾಳೆ ಎಂದರು.

ADVERTISEMENT

ಸಾಹಿತ್ಯ, ಜನಪದ, ಹೈನುಗಾರಿಕೆ, ಕೃಷಿ ರಂಗದಲ್ಲಿ ಮಹಿಳೆಯರು ಪ್ರಧಾನ ಪಾತ್ರವಹಿಸುತ್ತಿದ್ದಾರೆ. ಅಕ್ಷರಸ್ಥರ ಸಂಖ್ಯೆ ಅಧಿಕವಾದಂತೆಲ್ಲಾ ಸ್ತ್ರೀಯರ ಮೇಲಿನ ದೌರ್ಜನ್ಯ ಕಡಿಮೆಯಾಗಬೇಕಿತ್ತು. ಮಹಿಳೆಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಂಡು ಸಮಾನತೆಯ ಸಹಭಾಗಿತ್ವದಲ್ಲಿ ಬದುಕಬೇಕು ಎಂದು ಸಲಹೆ ನೀಡಿದರು.

ದಂತ ವೈದ್ಯೆ ಡಾ.ಮಂಜುಳಾ ಮಾತನಾಡಿ, ಹೆಣ್ಣು ತ್ಯಾಗಮಯಿ ಹಾಗೂ ಸಹನಾಶೀಲಳು. ಇತರರ ಬೆಳವಣಿಗೆಯಲ್ಲಿ ತನ್ನೆಲ್ಲಾ ನೋವು ನುಂಗಿಕೊಂಡು ಕುಟುಂಬದ ಗೌರವಕ್ಕೆ ಚ್ಯುತಿ ಬರದಂತೆ ಸಹನಾಮೂರ್ತಿಯಾಗಿದ್ದಾಳೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ದುಡಿಯುವ ವೈದ್ಯೆಯರು ಮತ್ತು ಸಿಬ್ಬಂದಿಗೆ ಮೆಮೊಗ್ರಾವಲ್‌ ಕ್ಯಾಂಪ್‌ ನಡೆಸಬೇಕು. ವರ್ಷಕ್ಕೊಮ್ಮೆ ಹೆಪಟೈಟಿಸ್‌ ವ್ಯಾಕ್ಸಿನ್‌ ಹಾಕಿಸಿ ಆರೋಗ್ಯ ಶಿಬಿರ ನಡೆಸಬೇಕು. ಆರೋಗ್ಯ ಇಲಾಖೆಯ ಮಹಿಳಾ ನೌಕರರ ಆರೋಗ್ಯ ರಕ್ಷಿಸಲು ಮುಂದಾಗಬೇಕು. ಸ್ತ್ರೀಯರು ಜ್ಞಾನವಂತರಾಗಿ ಹಿಂಜರಿಕೆ ಬಿಟ್ಟು, ಎಲ್ಲಾ ರಂಗದಲ್ಲೂ ಮುನ್ನುಗ್ಗಬೇಕು. ರೋಗಿಗಳ ಸೇವೆ ಮಾಡುವುದು ನಮ್ಮೆಲ್ಲರ ಪವಿತ್ರ ಕರ್ತವ್ಯ ಎಂದರು.

ಹೆರಿಗೆ ತಜ್ಞೆ ಡಾ.ಹೇಮಾಶ್ರೀ, ಡಾ.ಚಂದ್ರಲೇಖಾ, ಡಾ.ರಾಕೇಶ್‌, ಡಾ.ರಫೀಕ್‌, ಡಾ.ಯಶವಂತ್‌, ಡಾ.ಫಾರೂಕ್‌, ಡಾ.ರಶ್ಮಿ, ಡಾ.ಪವಿತ್ರಾ, ಡಾ.ಅನಿರುದ್ಧ, ಡಾ.ನಾಗನಾಥ್‌, ಡಾ.ಜ್ಞಾನಪ್ರಕಾಶ್‌, ಡಾ.ಆಶಾದೇವಿ, ನರ್ಸಿಂಗ್‌ ಅಧೀಕ್ಷಕಿ ಪದ್ಮಾ, ಕಚೇರಿ ಅಧೀಕ್ಷಕಿ ಮಂಜುಳಾ, ಲ್ಯಾಬ್‌ ಅಸಿಸ್ಟೆಂಟ್‌ ರವಿಕುಮಾರ್‌, ಫಾರ್ಮಾಸಿಸ್ಟ್‌ಗಳಾದ ಗುಣಶೇಖರ್‌, ಗಂಗಾಧರ್‌, ಪ್ರಕಾಶ್‌, ಸಿಬ್ಬಂದಿಯಾದ ಚಿಕ್ಕತಿಮ್ಮಯ್ಯ ಮಹಿಳಾ ದಿನದ ಮಹತ್ವ ಕುರಿತು ಮಾತನಾಡಿದರು.

ಡಾ.ಮಂಜುಳಾ, ಶುಶ್ರೂಷಕಿ ಇಂದಿರಾ, ನೇತ್ರಮ್ಮ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಶುಶ್ರೂಷಕಿ ಜಾನಕಿ ನೃತ್ಯ ಮಾಡಿದರು. ಬಾಬುಜಾನ್‌, ರವಿ ಚಿತ್ರಗೀತೆಗಳನ್ನು ಹಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜ್ಯೋತಿ ಕೃಷ್ಣಾನಾಯ್ಕ್‌, ಇಂದಿರಾ, ಉಮಾ, ಶ್ಯಾಮಲಾ, ಆಂಜಿನಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.