ADVERTISEMENT

ಮಾವು ಬೆಳೆಗಾರರಿಗಾಗಿ ಕಾರ್ಯಾಗಾರ ಇಂದು

ಮಾವು ಸಂಸ್ಕರಣೆ, ಮೌಲ್ಯವರ್ಧನೆ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 4:23 IST
Last Updated 18 ಜನವರಿ 2023, 4:23 IST
ಕಾರ್ಯಕ್ರಮ ನಡೆಯಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣ
ಕಾರ್ಯಕ್ರಮ ನಡೆಯಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣ   

ರಾಮನಗರ: ರೈತರಲ್ಲಿ ಮಾವು ಕೃಷಿ ಬಗೆಗಿನ ಆಸಕ್ತಿ ಹೆಚ್ಚಿಸಿ, ಅವರಲ್ಲಿನ ಸಂದೇಹಗಳಿಗೆ ವೈಜ್ಞಾನಿಕ ಉತ್ತರಗಳನ್ನು ಕಂಡುಕೊಳ್ಳುವ ಸಲುವಾಗಿ ‘ಪ್ರಜಾವಾಣಿ’ಯು ಇದೇ 18ರಂದು ಬೆಳಿಗ್ಗೆ 10ಕ್ಕೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾವು ಬೆಳೆಗಾರರಿಗಾಗಿ ತಾಂತ್ರಿಕ ಕಾರ್ಯಾಗಾರ ಆಯೋಜಿಸಿದೆ.

ಪ್ರಜಾವಾಣಿಯ ಅಮೃತ ಮಹೋತ್ಸವ ಅಂಗವಾಗಿ ನಡೆದಿರುವ ಈ ಕಾರ್ಯಕ್ರಮಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ಮಂಡಳಿ ಸಹಕಾರ ನೀಡಿವೆ. ರಾಮನಗರ ಜಿಲ್ಲೆಯ ಮಾವು ಬೆಳೆಗಾರರ ಸಂಘಗಳು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಿಲ್ಲಾ ಮಾವು ಮತ್ತು ತೆಂಗು ರೈತ ಉತ್ಪಾದಕ ಸಂಸ್ಥೆ ಕೈ ಜೋಡಿಸುತ್ತಿವೆ.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎ. ಮಂಜುನಾಥ್‌, ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜು, ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌ ರಾಜೇಂದ್ರನ್‌, ಜಿ.ಪಂ. ಸಿಇಒ ದಿಗ್ವಿಜಯ್‌ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್‌ ಬಾಬು, ಜಿ.ಪಂ. ಉಪಕಾರ್ಯದರ್ಶಿ ಟಿ.ಕೆ. ರಮೇಶ್‌ ಹಾಗೂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮುನೇಗೌಡ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಈ ಕಾರ್ಯಾಗಾರದಲ್ಲಿ ವಿವಿಧ ವಿಷಯ ತಜ್ಞರು ಪಾಲ್ಗೊಳ್ಳಲಿದ್ದು, ಪ್ರಸಕ್ತ ಹಂಗಾಮಿನಲ್ಲಿ ಮಾವಿನ ಸ್ಥಿತಿಗತಿ ಮತ್ತು ಕೈಗೊಳ್ಳಬೇಕಾದ ಆರೈಕೆ– ಔಷದೋಪಚಾರದ
ಕುರಿತು ಬೆಳಕು ಚೆಲ್ಲಲಿದ್ದಾರೆ. ರೈತರಿಂದಲೇ ಮಾವಿನ ನೇರ ಮಾರಾಟ, ರಫ್ತು ಅವಕಾಶಗಳು, ಮಾವಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಮ್ಯಾಂಗೊ ಟೂರಿಸಂ ಮೊದಲಾದ ವಿಷಯಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾವು ಕೃಷಿ ಸಂಬಂಧ ಹೊಸ ತಂತ್ರಜ್ಞಾನಗಳ ವಸ್ತು ಪ್ರದರ್ಶನ ಇರಲಿದೆ. ಜೊತೆಗೆ ಸಬ್ಸಿಡಿ ದರದಲ್ಲಿ ರೈತರಿಗೆ ಮಾವಿನ ಕ್ರೇಟ್‌, ಮ್ಯಾಂಗೊ ಸ್ಪೆಷಲ್‌ ಮೊದಲಾದವುಗಳ ಸಾಂಕೇತಿಕ ವಿತರಣೆಯೂ ಇದೆ. ಇವುಗಳಿಗೆ ಆಸಕ್ತರು ರೈತರು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಕೌಂಟರ್ ಸಹ ಇರಲಿದೆ. ರೈತರಿಗೆ ಮುಕ್ತ ಪ್ರವೇಶವಿದೆ.

ಯಾವ ವಿಷಯ; ಯಾರ ಮಾತು?

‘ಮಾವು ಬೆಳೆಯಲ್ಲಿನ ಆಧುನಿಕ ತಂತ್ರಜ್ಞಾನಗಳು’ ವಿಷಯ ಕುರಿತು ನಿವೃತ್ತ ವಿಜ್ಞಾನಿ ಹಾಗೂ ಬೆಂಗಳೂರಿನ ಐಐಎಚ್‌ಆರ್‌ ಫ್ರೂಟ್ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ಮಾತನಾಡಲಿದ್ದಾರೆ. ಕೋಲಾರದ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಚ್‌.ಸಿ. ಕೃಷ್ಣ ‘ಮಾವು ಸಂಸ್ಕರಣೆ ಮತ್ತು ಮಾಗಿಸುವ ವಿಧಾನಗಳು’ ಕುರಿತು ಬೆಳಕು ಚೆಲ್ಲಲಿದ್ದಾರೆ. ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಕೀಟವಿಜ್ಞಾನಿ ಡಾ. ರಾಜೇಂದ್ರ ಪ್ರಸಾದ್‌ ‘ಮಾವು ಬೆಳೆಯಲ್ಲಿನ ಕೀಟಬಾಧೆ ನಿಯಂತ್ರಣ’ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ. ‘ಮಾವು ಮಾರುಕಟ್ಟೆ ಅವಕಾಶಗಳು’ ಕುರಿತು ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.