ADVERTISEMENT

ನಾಡು ನುಡಿ ಬೆಳವಣಿಗೆ ಯುವಜನರ ಜವಾಬ್ದಾರಿ

ನಾರಾಯಣಗೌಡ-ನಾಗಮ್ಮ ಮತ್ತು ಕಸಾಪದ ಎರಡು ದತ್ತಿ ಉಪನ್ಯಾಸ ಹಾಗೂ ಗೀತಗಾಯನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:40 IST
Last Updated 3 ಫೆಬ್ರುವರಿ 2020, 13:40 IST
ಚನ್ನಪಟ್ಟಣದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೀಬನಹಳ್ಳಿ ಸ್ವಾಮಿ, ಅಣ್ಣಯ್ಯ ತೈಲೂರು ಅವರನ್ನು ಸನ್ಮಾನಿಸಲಾಯಿತು
ಚನ್ನಪಟ್ಟಣದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೀಬನಹಳ್ಳಿ ಸ್ವಾಮಿ, ಅಣ್ಣಯ್ಯ ತೈಲೂರು ಅವರನ್ನು ಸನ್ಮಾನಿಸಲಾಯಿತು   

ಚನ್ನಪಟ್ಟಣ: ಕನ್ನಡ ನಾಡು ನುಡಿಯ ಬೆಳವಣಿಗೆ ಇಂದಿನ ಯುವಸಮೂಹದ ಜವಾಬ್ದಾರಿಯಾಗಿದೆ ಎಂದು ಒಕ್ಕಲಿಗರ ಸಾರ್ವಜನಿಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಪುಟ್ಟಲಿಂಗಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ನಡೆದ ನಾರಾಯಣಗೌಡ-ನಾಗಮ್ಮ ಮತ್ತು ಕಸಾಪದ ಎರಡು ದತ್ತಿ ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯರವರ ಪರಿಶ್ರಮದ ಫಲವಾಗಿ ಉದಯಿಸಿದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕರ್ನಾಟಕ ಏಕೀಕರಣವಾದಾಗಿನಿಂದ ಕನ್ನಡ ಭಾಷೆ ಸಂಪದ್ಭರಿತವಾಗಿದ್ದು, ಇದುವರೆವಿಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದೆ. ಯಾವ ಭಾಷೆಗೂ ಸಿಗದ ಸ್ಥಾನಮಾನ ಕನ್ನಡಕ್ಕಿದೆ ಎಂದರು.

ADVERTISEMENT

ಸನ್ಮಾನ ಸ್ವೀಕರಿಸಿದ ಸಹಪ್ರಾಧ್ಯಾಪಕ ಡಾ.ಅಣ್ಣಯ್ಯ ತೈಲೂರು ಮಾತನಾಡಿ, ‘ಕವಿರಾಜಮಾರ್ಗದಿಂದ ಆದಿಯಾಗಿ ಕುವೆಂಪುವರೆಗೆ ಕನ್ನಡವನ್ನು ಸಮೃದ್ಧವಾಗಿ ಕಟ್ಟುವ ಕೆಲಸವಾಗಿದೆ. ಮುಂದೆ ಅದರ ಕೆಲಸ ಯುವಶಕ್ತಿಯಾದ ನಿಮ್ಮ ಕೈಯಲ್ಲಿದೆ. ವಚನಕಾರರು ನುಡಿದಂತೆ ನಡೆದವರು. ಜೀವನ ಬೇರೆ, ಕೃತಿ ಬೇರೆ ಮಾಡಿಕೊಂಡವರಲ್ಲ. ಜಾತ್ಯತೀತ ಸಮಾಜದ ಸೃಷ್ಟಿಗಾಗಿ ಕನ್ನಡ ಸಾಹಿತ್ಯ ರಚಿಸಿದವರು. ಆದರೆ ಇಂದು ಜಾತಿಗಳ ಆಧಾರದ ಮೇಲೆ ಸಾಹಿತಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನದಂತೆ ನಡೆದಾಗ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ. ಪಠ್ಯದ ಜೊತೆಗೆ ಇತರೆ ಚಟುವಟಿಕೆಗಳಾದ ಸಾಹಿತ್ಯ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡರೆ ಸಾಧಕರಾಗಿ ಬೆಳೆಯಬಹುದು ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಚಲುವರಾಜು ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದ ಸೀಬನಹಳ್ಳಿ ಪಿ.ಸ್ವಾಮಿ ಹಾಗೂ ಡಾ.ಅಣ್ಣಯ್ಯ ತೈಲೂರು ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಎಚ್.ಪುಟ್ಟರಾಜು, ಎಸ್.ಅಶೋಕ್ ಪ್ರಭು, ಗೋವಿಂದಹಳ್ಳಿ ಶಿವಣ್ಣ, ಎಂ.ಟಿ.ನಾಗರಾಜು ರಂಗಗೀತೆಗಳನ್ನು ಹಾಡಿದರು.

ತಾಲ್ಲೂಕು ಕಸಾಪ ಕಾರ್ಯದರ್ಶಿ ಮಂಜೇಶ್ ಬಾಬು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಉಪನ್ಯಾಸಕ ಶಿವರಾಮ ಭಂಡಾರಿ, ಅಶ್ವಥ್, ಕೆ.ಪಿ.ರಾಜು, ಶ್ರೀನಿವಾಸ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.