ADVERTISEMENT

ಯತ್ನಾಳ ಕೆಟ್ಟಚಾಳಿ ಮುಂದುವರಿಕೆ: ಸಂಗಮೇಶ ನಿರಾಣಿ 

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 12:44 IST
Last Updated 15 ಜನವರಿ 2020, 12:44 IST
ಸಂಗಮೇಶ ಆರ್.ನಿರಾಣಿ
ಸಂಗಮೇಶ ಆರ್.ನಿರಾಣಿ   

ಬಾಗಲಕೋಟೆ: ‘ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹೋದರ ಮುರುಗೇಶ ನಿರಾಣಿ ವಿರುದ್ಧ ವಿವೇಕರಹಿತವಾಗಿ ಬಾಯಿ ಹರಿಬಿಟ್ಟಿರುವುದು ಖಂಡನೀಯ’ ಎಂದು ಉದ್ಯಮಿ ಸಂಗಮೇಶ ನಿರಾಣಿ ಹೇಳಿದ್ದಾರೆ.

‘ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರ ಬಗ್ಗೆ ಹಗುರಾಗಿ ಮಾತನಾಡುತ್ತಿದ್ದರು. ಜೆಡಿಎಸ್‌ನಲ್ಲಿದ್ದಾಗ ಜಗದೀಶ ಶೆಟ್ಟರ್ ಮತ್ತು ಪ್ರಹ್ಲಾದ ಜೋಷಿ ಅವರನ್ನು ಶೆಟ್ಟಿ-ಭಟ್ಟ ಕೂಡಿ ರಾಜ್ಯವನ್ನು ಮೂರಾಬಟ್ಟಿ ಮಾಡಿದ್ದಾರೆ ಎಂದು ಬಹಿರಂಗವಾಗಿ ಟೀಕೆ ಮಾಡುತ್ತಿದ್ದರು. ಪ್ರಧಾನಿ ನರೆಂದ್ರ ಮೋದಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರಿಗೂ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಈಗ ಮುರುಗೇಶ ನಿರಾಣಿ ವಿರುದ್ಧ ಹೇಳಿಕೆ ನೀಡುವ ಕೆಟ್ಟ ಚಾಳಿ ಮುಂದುವರೆದ್ದಾರೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮೂರು ವರ್ಷಗಳ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್‌ಗೆ ಸ್ಪರ್ಧಿಸಿದಾಗ ನಿರಾಣಿ ಅವರ ಮನೆ ಬಾಗಿಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಕಳೆದುಕೊಂಡ ರಾಜಕೀಯ ಜೀವನ ಮರಳಿ ಪಡೆದರು. ಈಗ ಆ ಉಪಕಾರ ಮರೆತಂತೆ ಕಾಣುತ್ತಿದೆ. ಮುರುಗೇಶ ನಿರಾಣಿಯವರು 1996-97ರಲ್ಲಿಯೇ ಸಕ್ಕರೆ ಕಾರ್ಖಾನೆ ಆರಂಭಿಸಿದ್ದಾರೆ. ಉದ್ಯಮಿಯಾಗಿ ಬೆಳೆದ ಮೇಲೆ 2004ರಲ್ಲಿ ಮೊದಲ ಬಾರಿಗೆ ಶಾಸಕರಾದರು. ಮುರುಗೇಶ ಶಾಸಕರಾದ ಮೇಲೆ ಉದ್ಯಮಿಯಾಗಿದ್ದಾರೆ ಎಂದು ಯತ್ನಾಳ ಹೇಳಿಕೆ ಸರಿಯಲ್ಲ’ ಎಂದು ಸಂಗಮೇಶ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.