ADVERTISEMENT

ಆಧುನಿಕತೆಯಿಂದ ಭಾಷಾ ಪರಂಪರೆ ಜಡ

ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಲೇಖಕ ಡಾ.ಗಣೇಶ್‌ ದೇವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2013, 10:31 IST
Last Updated 18 ಅಕ್ಟೋಬರ್ 2013, 10:31 IST

ಸಾಗರ: ವಸಾಹತುಶಾಹಿ ಮತ್ತು ಆಧುನಿಕತೆಯ ಪ್ರಭಾವದಿಂದಾಗಿ ಭಾರತವೂ ಸೇರಿದಂತೆ ಜಗತ್ತಿನ ಸಮೃದ್ಧವಾದ ದೇಶ ಭಾಷಾ ಪರಂಪರೆ ಬಡವಾಗುತ್ತಿದೆ ಎಂದು ಸಂಶೋಧಕ, ಲೇಖಕ ಡಾ.ಗಣೇಶ್‌ ದೇವಿ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಗುರುವಾರ ‘ದೇಶ ಭಾಷಾ ಪರಂಪರೆಗಳು’ ಎಂಬ ವಿಷಯದ ಕುರಿತು ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನ ಬರುವ ಮೊದಲು ಲಿಪಿ ಇಲ್ಲದ ಭಾಷೆಗಳಿಗೂ ಸ್ವತಂತ್ರ ವ್ಯಕ್ತಿತ್ವ ಇತ್ತು. ಮುದ್ರಣ ಯಂತ್ರ ಬಂದ ನಂತರ ಲಿಪಿ ಇರುವ ಭಾಷೆಗಳು ಮಾತ್ರ ನಿಜವಾದ ಭಾಷೆಗಳು ಎನ್ನುವಂತಾಗಿದೆ ಎಂದರು.

ಮುಖ್ಯವಾಹಿನಿಯ ಭಾಷೆಗಳು, ಉಪ ಭಾಷೆಗಳು ಎನ್ನುವ ತಾರತಮ್ಯ ಹುಟ್ಟಿದ್ದೆ ಆಧುನಿಕ ತಂತ್ರಜ್ಞಾನದಿಂದ. ಈ ಹಿಂದೆ ಕಬೀರ್‌ದಾಸ್‌ ಹಾಗೂ ಮೀರಾಬಾಯಿ ತಮ್ಮ ಭಜನೆಗಳನ್ನು ರಚಿಸುವಾಗ ಸಂಗೀತ ಹಾಗೂ ಶಾಬ್ದಿಕ ಭಾಷೆ ಇವೆರಡನ್ನೂ ಮಿಶ್ರಣ ಮಾಡಿ ಸೃಷ್ಟಿಕಾರ್ಯ ನಡೆಸುತ್ತಿದ್ದರು. ಇದು ಮುದ್ರಣವಾಗಲೆಬೇಕು ಎಂಬ ಉದ್ದೇಶ ಅವರಿಗೆ ಇರಲಿಲ್ಲ. ಇಂತಹ ಜೀವನ ಕ್ರಮದ ಭಾಷಾ ಪರಂಪರೆ ತಂತ್ರಜ್ಞಾನದಿಂದಾಗಿ ನಿಧಾನವಾಗಿ ನಷ್ಟವಾಗುತ್ತಿದೆ ಎಂದು ಹೇಳಿದರು.

ಆಧುನಿಕ ಭಾರತದ ಇತಿಹಾಸದಲ್ಲಿ ಪ್ರಭುತ್ವಕ್ಕೆ ಅಧಿಕ ಸಂಖ್ಯೆಯ ಭಾಷೆಗಳು ಇದ್ದರೆ, ಅದು ತೊಡಕು ಎನ್ನುವಂತೆ ಕಂಡಿದೆ. ಈ ಕಾರಣಕ್ಕೆ ಕೆಲವು ಕ್ರಮಗಳ ಮುಖಾಂತರ ಅಧಿಕೃತ ಮಾನ್ಯತೆ ಹೊಂದಿರುವ ಭಾಷೆಗಳ ಸಂಖ್ಯೆಯನ್ನು ಪ್ರಭುತ್ವ ಕಡಿಮೆ ಮಾಡುತ್ತಾ ಬಂದಿದೆ. ಲಿಪಿ ಇರುವ ಮತ್ತು ಕನಿಷ್ಠ 10ಸಾವಿರ ಜನರು ಮಾತನಾಡುವ ಭಾಷೆಗಳಿಗೆ ಮಾತ್ರ ಅಧಿಕೃತ ಮಾನ್ಯತೆ ನೀಡುವ ವಿಧಾನದಿಂದ ಹಲವು ಉಪ ಭಾಷೆಗಳ ಅಸ್ತಿತ್ವಕ್ಕೆ ತೊಡಕಾಗಿದೆ ಎಂದರು.

ವಿಚಿತ್ರವೆಂದರೆ ಜಗತ್ತಿನ ಪ್ರಬಲ ಭಾಷೆ ಎನಿಸಿರುವ ಇಂಗ್ಲಿಷ್‌ ಭಾಷೆ ಸ್ವಂತ ಲಿಪಿ ಇಲ್ಲದೆ ರೋಮನ್‌ ಲಿಪಿಯನ್ನು ಅವಲಂಬಿಸಿದೆ. ಹಾಗೆ ನೋಡಿದರೆ ಇಂಗ್ಲೀಷ್‌ ಅನ್ನು ಅಧಿಕೃತ ಅಥವಾ ಮಾನ್ಯತೆ ಪಡೆದ ಭಾಷೆ ಎಂದು ಒಪ್ಪಿಕೊಳ್ಳುವುದು ಕಷ್ಟವಲ್ಲವೆ ಎಂದು ಅವರು ಪ್ರಶ್ನಿಸಿದರು.

ಭಾಷಾ ವೈವಿದ್ಯ ಎನ್ನುವುದು ಸಮಾಜ ಮತ್ತು ಸಂಸ್ಕೃತಿಗೆ ಒಂದು ಆಸ್ತಿಯೆ ಹೊರತು ತೊಡಕು ಅಲ್ಲ. ಅಗಾಧ ಸಂಖ್ಯೆಯ ಭಾಷೆಗಳನ್ನು ಒಂದೆಡೆ ಪಾರಂಪರಿಕ ಆಸ್ತಿಯಾಗಿಯೂ ಮತ್ತೊಂದೆಡೆ ಆರ್ಥಿಕ ಆಸ್ತಿಯಾಗಿಯೂ ಪರಿಗಣಿಸಬಹುದು. ಪ್ರತಿ ಭಾಷೆಯ ಪ್ರತಿಯೊಂದು ಪದವು ವಿಶ್ವ ದೃಷ್ಟಿಯನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿದೆ ಎಂದರು.

ಇಂಗ್ಲಿಷ್‌ನಿಂದ ಭಾರತೀಯ ಭಾಷೆಗಳಿಗೆ ಅಪಾಯವಿದೆ ಎನ್ನುವುದನ್ನು ಒಪ್ಪಲಾಗದು. ಇಂಗ್ಲಿಷ್‌ನ್ನು ಕಲಿಯುವ ಭರದಲ್ಲಿ ಒಂದು ಭಾರತೀಯ ಭಾಷೆ ಮತ್ತೊಂದು ಭಾರತೀಯ ಭಾಷೆಯನ್ನು ನಿರ್ಲಕ್ಷಿಸಿದಾಗ ಅಪಾಯ ಉಂಟಾಗುತ್ತದೆ. ಹೀಗೆ ಮಾಡುವುದು ನಮ್ಮ ಬುಡಕ್ಕೆ ನಾವೆ ಕೊಡಲಿ ಏಟು ಕೊಟ್ಟಂತೆ ಎಂದು ಅಭಿಪ್ರಾಯಪಟ್ಟರು.

ಪ್ರಪಂಚದ ಇತರ ರಾಷ್ಟ್ರಗಳಲ್ಲಿ ದೇಶ ಭಾಷೆಗಳ ಮೇಲೆ ಇಂಗ್ಲಿಷ್‌ ಭಾಷೆ ಮಾಡಿರುವ ಹಾನಿಯ ಪ್ರಮಾಣ ಅಗಾಧವಾದದ್ದು. ಭಾರತದಲ್ಲಿ ದೇಶ ಭಾಷಾ ಪರಂಪರೆಗಳ ಶಕ್ತಿ ವೈವಿದ್ಯವಾಗಿರುವುದರಿಂದ ಇತರ ದೇಶಗಳ ಮಾದರಿಯಲ್ಲಿ ಇಂಗ್ಲಿಷ್‌ಗೆ ಇಲ್ಲಿ ದೇಶ ಭಾಷೆಗಳ ಮೇಲೆ ಸವಾರಿ ಮಾಡಲು ಸಾಧ್ಯವಾಗಿಲ್ಲ ಎಂದರು.

ಮಧ್ಯಾಹ್ನ ಬೆಂಗಳೂರಿನ ಅಭಿಜ್ಞಾನ ತಂಡದಿಂದ ‘ಪುರುಷ ಸೂಕ್ತ’ ರಂಗಪ್ರಯೋಗ ಜೆ.ಶ್ರೀನಿವಾಸಮೂರ್ತಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟಿತು. ಸಂಜೆ ಪಂಡಿತ್‌ ಶೌನಕ್‌ ಅಭಿಷೇಕಿ ಮತ್ತು ಸಹಕಲಾವಿದರಿಂದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.