ADVERTISEMENT

ಈ ಮಗನ ಪಾಲಿಗೆ ಸ್ವಂತ ಅಪ್ಪನೇ ಯಮ!

ಮಗು ಮಾರಾಟ ಯತ್ನ: ಮನುಷ್ಯರ ದನಿ ಕೇಳಿದರೆ ನಡುಗುವ ಬಾಲಕ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:57 IST
Last Updated 15 ಡಿಸೆಂಬರ್ 2012, 6:57 IST

ಶಿವಮೊಗ್ಗ: ಆ ಬಾಲಕ ಕಣ್ಣು ಬಿಡುತ್ತಿಲ್ಲ; ಮನುಷ್ಯರ ದನಿ ಕೇಳಿದರೆ ಥರಥರ ನಡುಗುತ್ತಾನೆ. ಮೈ ತುಂಬಾ ಗಾಯ, ಎದೆಯಲ್ಲಿ ಹೊಲಿಗೆ.ತಂದೆಯಿಂದಲೇ ಅಮಾನುಷವಾಗಿ ಹಲ್ಲೆಗೆ ಒಳಗಾಗಿ ಈಗ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸ್ಟೀಫನ್‌ನ ಸದ್ಯದ ಸ್ಥಿತಿ.

ಎಡಗಣ್ಣಿಗೆ ತೀವ್ರ ಪೆಟ್ಟಾಗಿದೆ. ಮುಖ, ಕುತ್ತಿಗೆ, ಕಿವಿ ಹತ್ತಿರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಗಾಯಗಳಿವೆ. ಶ್ವಾಸಕೋಶಕ್ಕೆ ತೀವ್ರ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಎ. ಸ್ಟೀಫನ್ ಊರು ಭದ್ರಾವತಿ ತಾಲ್ಲೂಕು ನಿರ್ಮಲಾಪುರ ಗ್ರಾಮ. ಸಮೀಪದ ಕಾರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿ. ಈತನ ಪಾಲಿಗೆ ಈಗ ಅಪ್ಪ ಅಂತೋನಿಯೇ ಯಮ.

ಸೋಮವಾರ ಬಾಲಕ ಸ್ಟೀಫನ್‌ಗೆ ಎಂದಿನಂತಿರಲಿಲ್ಲ. ಅಮ್ಮ ಶಾಂತಾ ಎಂದಿನಂತೆ ಅಡುಗೆ ಮಾಡಿಟ್ಟು ಕಬ್ಬಿನ ಗದ್ದೆ ಕೂಲಿ ಕೆಲಸಕ್ಕೆ ತೆರೆಳಿದ್ದರು. ಅಕ್ಕನನ್ನು ಅಪ್ಪನೇ ಮಾತ್ರೆ ತರಲು ದೂರದ ಅಂಗಡಿಗೆ ಕಳುಹಿಸಿದ್ದ. ಇತ್ತ ಮನೆಯಲ್ಲಿ ಅಪ್ಪ-ಮಗ ಇಬ್ಬರೇ ಇದ್ದಾಗ ಮಗನ ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿದ ಅಪ್ಪ ಕೂಗಾಟ ಕೇಳಿಸದಂತೆ ಮಾಡಿದ್ದಾನೆ. ತದನಂತರ ಚಾಕುವಿನಿಂದ ಮುಖ ಕೊಯ್ದಿದ್ದಾನೆ. ಕಣ್ಣಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಎದೆ ಮೇಲೆ ಕಾಲಿಟ್ಟು ನಿಂತಿದ್ದಾನೆ. ತಲೆಯನ್ನು ನೆಲಕ್ಕೆ ಬಡಿದಿದ್ದಾನೆ. ಬಾಲಕ ಪ್ರಜ್ಞೆ ತಪ್ಪಿದಾಗ ಸತ್ತ ಎಂದು ತಿಳಿದು ಅಡುಗೆಮನೆ ಮೂಲೆಗೆ ಹಾಕಿ, ಪರಾರಿಯಾಗಿದ್ದಾನೆ.

`ಮಾರಾಟ ಮಾಡಲು ಯತ್ನಿಸಿದ್ದ'
`ಮಂಡ್ಯಕ್ಕೆ ಮದುವೆ ಮಾಡಿಕೊಟ್ಟಿತ್ತು. ಆದರೆ, ಗಂಡನ ಹಿಂಸೆ ತಾಳಲಾರದೆ ಕೆಲ ವರ್ಷ ಜತೆಗಿದ್ದು ಊರಿಗೆ ಹಿಂತಿರುಗಿದ್ದೆ. ಒಂಟಿಯಾಗಿ ಎರಡು ಮಕ್ಕಳನ್ನು ಓದಿಸುತ್ತಾ, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಕಳೆದ 6 ತಿಂಗಳ ಹಿಂದೆ ಗಂಡ ನಮ್ಮ ಜತೆ ಬಂದು ಇದ್ದ. ಈ ನಡುವೆ ಎರಡು ಬಾರಿ ಮಗನನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ. ವಿಪರೀತ ಕುಡಿಯುತ್ತಿದ್ದ; ಯಾರು ಜತೆ ಮಾತನಾಡಿದರೂ ಅನುಮಾನ ಪಡುತ್ತಿದ್ದ' ಎಂದು ಕಣ್ಣೀರಿಡುತ್ತಾರೆ ಶಾಂತಾ. 

ಬಾಲಕನ ಎದೆ, ತಲೆ ಮತ್ತು ಎಡಗಣ್ಣಿಗೆ ತೀವ್ರ ಪೆಟ್ಟಾಗಿದೆ. ಎದೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತಲೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಣ್ಣಿನ ಬಗ್ಗೆ ಈಗಲೇ ಎನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು.

ಬಾಲಕನ ಕಣ್ಣಿನ ದೃಷ್ಟಿ ಮರಳಿ ಬರುವುದು ಕಷ್ಟ. ಒಂದು ವೇಳೆ ಬಾಲಕ ಆರೋಗ್ಯವಾದರೂ ಅವನು ಸಹಜ ಸ್ಥಿತಿಗೆ ಬರುವುದು ಬಹಳ ಕಷ್ಟ. ಆತನಿಗೆ ಸಾಕಷ್ಟು ಕೌನ್ಸೆಲಿಂಗ್ ಬೇಕಾಗುತ್ತದೆ ಎನ್ನುತ್ತಾರೆ ಶಶ್ರೂಷಕಿಯರು.

ಬಾಲಕನ ಚಿಕಿತ್ಸೆಗೆ ಊರಿನವರು, ವಿವಿಧ ಸಂಘ-ಸಂಸ್ಥೆಗಳು ಧನಸಹಾಯ ಮಾಡಿವೆ. ಚಿಕಿತ್ಸೆಗೆ ಇನ್ನಷ್ಟು ಹಣ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಸುವರ್ಣ ಆರೋಗ್ಯ ಚೈತನ್ಯದಡಿ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವೇ ಎಂದು ಸಿಸ್ಟರ್ ಮೇರಿ ಮತ್ತು ಅವರ ತಂಡ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿದೆ. ಅಲ್ಲಿಂದ ಸ್ಪಷ್ಟ ಭರವಸೆ ಇನ್ನೂ ಸಿಕ್ಕಿಲ್ಲ. ಪೊಲೀಸರು ನೆಪಕ್ಕಾಗಿ ದೂರು ದಾಖಲಿಸಿಕೊಂಡಿದ್ದಾರೆ. ದೂರು ಕೊಡಲು ಹೋದವರ ಜತೆ ಅವರು ನಡೆದುಕೊಂಡು ರೀತಿಯೇ ಅದನ್ನು ಹೇಳುತ್ತದೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಈ ಪ್ರಕರಣದ ಮಾಹಿತಿಯೇ ಇಲ್ಲ. ಜಿಲ್ಲೆಯವರೇ ಆದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಉಮೇಶ್ ಆರಾಧ್ಯ ಅವರನ್ನು `ಪ್ರಜಾವಾಣಿ' ಸಂಪರ್ಕಿಸಲು ಪ್ರಯತ್ನಿಸಿದಾಗ ಶುಕ್ರವಾರ ಇಡೀ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.