ADVERTISEMENT

ಉತ್ತರ ಪತ್ರಿಕೆ ಹಗರಣ- ದಿನಕ್ಕೊಂದು ತಿರುವು; ತನಿಖೆಯಿಂದ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 8:00 IST
Last Updated 19 ಜೂನ್ 2012, 8:00 IST

ಭದ್ರಾವತಿ: ಕುವೆಂಪು ವಿವಿ ಉತ್ತರ ಪತ್ರಿಕೆ ಬಯಲು ಹಗರಣ ಜಾಲದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದ್ದು, ಬಂಧಿತ ಆರೋಪಿ ಮಂಜುನಾಥ್ ಅಲಿಯಾಸ್ ನಿದಿಗೆ ಮಂಜ ಪರೀಕ್ಷೆ ಮುಗಿದ ಎರಡು ದಿನದಲ್ಲಿ ಖಾಲಿ ಬುಕ್‌ಲೆಟ್ ನೀಡಿ ಉತ್ತರ ಬರೆಯಿಸಿ ಅದನ್ನು ಸೂಕ್ತ ಜಾಗಕ್ಕೆ ತಲುಪಿಸಿದ್ದ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣದ ಬಂಧಿತ ಆರೋಪಿ ಸಿದ್ದಾಚಾರಿ ನೀಡಿದ ಖಾಲಿ ಬುಕ್‌ಲೆಟ್‌ಗಳನ್ನು ಪಡೆದು, ಅದನ್ನು ಎರಡು ದಿನದಲ್ಲಿ ವಿದ್ಯಾರ್ಥಿಗಳಿಗೆ ನೀಡಿ ಉತ್ತರ ಬರೆಯಿಸಿ, ಹಾಲ್ ಟಿಕೆಟ್ ಜೆರಾಕ್ಸ್ ಪ್ರತಿ ಇಟ್ಟು ತಲುಪಿಸುತ್ತಿದ್ದೆ ಎಂದು ಮಂಜ ತನಿಖೆಯಲ್ಲಿ ತಿಳಿಸಿದ್ದಾನೆ.

2011ರ ನವೆಂಬರ್, ಡಿಸೆಂಬರ್ ಬಿಎ ಪರೀಕ್ಷೆಗೆ ಸಂಬಂಧಿಸಿದಂತೆ 19 ಖಾಲಿ ಬುಕ್‌ಲೆಟ್ ಪಡೆದು, ಪರಿಚಿತರಾದ 9 ವಿದ್ಯಾರ್ಥಿಗಳಿಗೆ ಅದನ್ನು ನೀಡಿ ತಲಾ ್ಙ 2,500ರಂತೆ ಹಣ ಸಂಗ್ರಹಿಸಿ, ಬರೆದ ಉತ್ತರ ಪತ್ರಿಕೆಗಳ ಜತೆಗೆ ್ಙ 34,000 ನಗದನ್ನು ಸಿದ್ದಾಚಾರಿಗೆ ಒಪ್ಪಿಸಿದ್ದು, ಆತ ್ಙ 8,000 ನನಗೆ ನೀಡಿದ ಎಂದು ಮಂಜ ತನಿಖೆ ವೇಳೆ ಬಹಿರಂಗ ಮಾಡಿದ್ದಾನೆ.

ಪ್ರಸಕ್ತ ಸಾಲಿನ ಹೊಳೆಹೊನ್ನೂರು ಕಾಲೇಜಿನಕೆ.ಎಂ. ಸಾಗರ್, ಶಿಕಾರಿಪುರ ಕಾಲೇಜಿನ ರಾಧಮ್ಮ, ಶಿವಮೊಗ್ಗ ಡಿವಿಎಸ್ ಕಾಲೇಜಿನ ಸಂದೀಪ್, ನೀಲಕಂಠಪ್ಪ, ಎಚ್.ಎಸ್. ದಿನೇಶ್, ಎನ್ ಮಂಜುನಾಥ್, ಗೀತಾ, ರಮೇಶ್, ಎಂ.ಬಿ. ನಾಗರಾಜ್ ಅವರ ಇಂಗ್ಲಿಷ್ ವಿಷಯದ 18 ಉತ್ತರ ಪತ್ರಿಕೆಗಳು ಹಾಗೂ ಹಳೆಯ 5 ಉತ್ತರ ಪತ್ರಿಕೆಗಳು ಸೇರಿದಂತೆ ಒಟ್ಟು 23 ಪತ್ರಿಕೆಗಳನ್ನು ಸಿದ್ದಾಚಾರಿಗೆ ನೀಡಿ ್ಙ 40,000 ನೀಡಿ, ಕಮಿಷನ್ ರೂಪದಲ್ಲಿ ್ಙ 14,000 ಪಡೆದಿರುವುದಾಗಿ ಆತ ನುಡಿದಿದ್ದಾನೆ.

ತೊಳಹುಣಸೆ ಗ್ರಾಮದ ಬಂಧಿತ ಆರೋಪಿಎನ್. ರಮೇಶ್ 2011ರ ಪರೀಕ್ಷೆಯಲ್ಲಿ ದಾವಣಗೆರೆ ಸರ್ಕಾರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಪಾಸು ಮಾಡಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶಿವು, ಲತಾ, ಹರಿಣಿ, ನೇತ್ರಾ, ಭಾಗ್ಯ ಹಾಗೂ ಗೀತಾಬಾಯಿ ಅವರ ಇಂಗ್ಲಿಷ್ ವಿಷಯದ ತೇರ್ಗಡೆಗೆ ಉತ್ತರ ಬರಿಸಿದ್ದಾಗಿ, ಅದಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ ್ಙ 500 ಪಡೆದಿದ್ದಾಗಿ ಹೇಳಿಕೆ ನೀಡಿದ್ದಾನೆ.

ಪೊಲೀಸ್ ವಶಕ್ಕೆ
ಬಂಧಿತ ಆರೋಪಿ ನಿದಿಗೆ ಮಂಜನನ್ನು ಡಿವೈಎಸ್‌ಪಿ ಶ್ರೀಧರ್ ಅವರ ನೇತೃತ್ವದ ತನಿಖಾ ತಂಡ ಸೋಮವಾರ ವಾರದ ಮಟ್ಟಿಗೆ ಪುನಃ ಪೊಲೀಸ್ ಅಭಿರಕ್ಷೆಗೆ ತೆಗೆದುಕೊಂಡಿತು.

ಈ ನಡುವೆ ಬಂಧಿತ ವಿವಿ ಪರೀಕ್ಷಾಂಗ ವಿಭಾಗದ ಸಹಾಯಕ ಕುಲಸಚಿವ ಪಾಲಾಕ್ಷನಾಯ್ಕ ತೊಳಹುಣಸೇ ಗ್ರಾಮದ ಬಂಧಿತ ಆರೋಪಿ ರಮೇಶನ ಹತ್ತಿರದ ಸಂಬಂಧಿ ಎಂದು ತನಿಖೆಯಿಂದ ದೃಢಪಟ್ಟಿದ್ದು, ಈತನ ಕುರಿತು ಈ ಹಿಂದೆ ಸಾಕಷ್ಟು ಅಪಾದನೆಗಳಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.