ಸೊರಬ: `ಎಲ್ಲಾ ಜಾತಿ ಧರ್ಮಗಳನ್ನು ಪ್ರೀತಿಸುವವನೇ ನಿಜವಾದ ಮನುಷ್ಯ. ಹಾಗಾಗಿ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಸ್ನೇಹದಿಂದ ಬೆಳೆದಾಗ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದಿಲ್ಲ' ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.
ಈಚೆಗೆ ದಾರುಸ್ಸಲಾಂ ಶಾದಿ ಮಹಲ್‌ನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ರಂಜಾನ್ ಉಪವಾಸ ತಿಂಗಳ ಪ್ರಯುಕ್ತ ಹಮ್ಮಿಕೊಂಡಿದ್ದ ಸೌಹಾರ್ದ ಕೂಟದಲ್ಲಿ ಸನ್ಮಾಸ ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿಯೊಂದು ಧರ್ಮ ಗ್ರಂಥಗಳು ಮನುಷ್ಯ ಹೇಗೆ ಸಮಾಜದಲ್ಲಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನೀತಿ ಹೇಳುತ್ತವೆ. ಅದರಲ್ಲಿ ಕುರಾನ್ ಗ್ರಂಥವೂ ಕೂಡಾ ಒಂದಾಗಿದ್ದು, ಅದರಲ್ಲಿರುವ ಸಾರವನ್ನು ಅರಿಯಬೇಕು ಎಂದರು.
`ತಂದೆ ಎಸ್.ಬಂಗಾರಪ್ಪ ಅವರು ಎಲ್ಲಾ ಧರ್ಮ, ಜಾತಿ, ಸಮಾಜವನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರ ಪುತ್ರನಾಗಿ ನಾನೂ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಎಲ್ಲರನ್ನೂ ಗೌರವಿಸಿ, ಪ್ರೀತಿ- ವಿಶ್ವಾಸದಿಂದ ಕಾಣುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಗೆಲುವಿನ ಹಿಂದೆ ಮುಸ್ಲಿಮರ ಶ್ರಮವೂ ಇದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು' ಎಂದು ತಿಳಿಸಿದರು.
ಅಂಜುಮಾನ್ ಕಮಿಟಿ ಹಾಗೂ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ದಾರುಸ್ಸಲಾಂ ಟ್ರಸ್ಟ್ ಅವರು ಕುರಾನ್‌ನ ಕನ್ನಡ ಅನುವಾದ ಗ್ರಂಥವನ್ನು ಶಾಸಕ ಮಧುಬಂಗಾರಪ್ಪ ಅವರಿಗೆ ನೀಡಿ ಗೌರವಿಸಿದರು.
ದಾರುಸ್ಸಲಾಂ ಟ್ರಸ್ಟ್ ಅಧ್ಯಕ್ಷ ಎಂ.ಬಷೀರ್ ಅಹಮದ್, ಅಂಜುಮಾನ್ ಕಮಿಟಿ ಅದ್ಯಕ್ಷ ನೂರ್ ಅಹಮದ್, ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಶಬ್ಬೀರ್, ಕಾರ್ಯಾಧ್ಯಕ್ಷ ಸೈಯದ್ ಅತಿಕ್, ಸ್ವಾಲೇಹಾ ಸಾಬ್, ಅನ್ಸರ್ ಅಹಮದ್, ಫಯಾಜ್ ಅಹ್ಮದ್, ಷರೀಫ್, ಸೈಯದ್ ಮೆಹಬೂಬ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.