ಸಾಗರ: ‘ಕುವೆಂಪು ಅವರ ಕಾವ್ಯಕ್ಕೆ ಇರುವುದು ಕೇವಲ ಕನ್ನಡದ ಪರಂಪರೆ ಅಲ್ಲ. ವಿಶ್ವಾತ್ಮಕ ಪರಂಪರೆಯ ಸೃಷ್ಟಿಯನ್ನು ಕುವೆಂಪು ತಮ್ಮ ಕಾವ್ಯಕ್ಕೆ ಕಟ್ಟಿಕೊಂಡಿದ್ದಾರೆ’ ಎಂದು ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ’ ಸಂಸ್ಕೃತಿ ಶಿಬಿರದಲ್ಲಿ ಭಾನುವಾರ ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯದ ಕುರಿತು ಮಾತನಾಡಿದ ಅವರು, ಕಾವ್ಯವನ್ನು ಪೂರ್ಣದೃಷ್ಟಿಯಿಂದ ನೋಡಬೇಕು ಎಂಬ ತತ್ವ ಅವರ ರಾಮಾಯಣ ದರ್ಶನಂ ಕಾವ್ಯದ ಹಿಂದೆ ಇದೆ ಎಂದು ಬಣ್ಣಿಸಿದರು.
‘ನಮ್ಮ ನಡುವೆ ಹಲವು ಬಗೆಯ ರಾಮಾಯಣಗಳು ಇದ್ದರೂ ಕುವೆಂಪು ಮತ್ತೆ ಯಾಕೆ ರಾಮಾಯಣ ದರ್ಶನಂ ಬರೆಯಲು ಮುಂದಾದರು ಎನ್ನುವ ಪ್ರಶ್ನೆ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಮತ್ತೆ ಮತ್ತೆ ಓದುವುದು, ಬರೆಯುವುದು, ತನ್ಮೂಲಕ ಪರಂಪರೆಯನ್ನು ವರ್ತಮಾನಕ್ಕೆ ಆಹ್ವಾನಿಸಿ ಪ್ರಸ್ತುತಗೊಳಿಸುತ್ತ ಹೋಗುವುದರೊಂದಿಗೆ ತನ್ನ ಕಾಲಕ್ಕೆ ಅಗತ್ಯವಾದ ಮೌಲ್ಯಗಳನ್ನು ಕಟ್ಟಿಕೊಡುವ ಕುವೆಂಪು ಅವರಲ್ಲಿನ ತುಡಿತ ರಾಮಾಯಣ ದರ್ಶನಂ ಕಾವ್ಯ ರಚನೆಗೆ ಪ್ರೇರಣೆ ನೀಡಿದೆ’ ಎಂದು ವ್ಯಾಖ್ಯಾನಿಸಿದರು.
‘ಪರಂಪರೆಯಲ್ಲಿ ಕಂಡ ತಪ್ಪುಗಳನ್ನು ಶೋಧಿಸುವ ಕೆಲಸ ರಾಮಾಯಣ ದರ್ಶನಂ ಕಾವ್ಯದಲ್ಲಿ ನಡೆದಿದೆ. ಪರಂಪರೆಯನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿ, ಶೋಧಿಸಿ ಅದನ್ನು ತಿದ್ದಿ ಬಳಸಬೇಕು ಎಂಬ ಧೋರಣೆಯನ್ನು ಈ ಕಾವ್ಯದಲ್ಲಿ ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ರಾಮಾಯಣ ಒಂದು ಪರಂಪರೆ ಅಲ್ಲ. ರಾಮಾಯಣದಲ್ಲಿ ಅನೇಕ ಧಾರೆಗಳಿವೆ. ವಾಲ್ಮೀಕಿ ರಾಮಾಯಣವನ್ನಷ್ಟೇ ರಾಮಾಯಣದ ಅಧಿಕೃತ ಧಾರೆ ಎಂದು ನಂಬಬೇಕಿಲ್ಲ. ಹಾಗೆ ನೋಡಿದರೆ ಕಾವ್ಯತ್ವದ ಭಾಷಾ ಪ್ರಯೋಗ, ಭಾವ ಜಗತ್ತು ನಿರ್ಮಾಣ, ವಾಲ್ಮೀಕಿ ರಾಮಾಯಣದ ಪುನರ್ ನಿರ್ಮಾಣ ಹೀಗೆ ಎಲ್ಲಾ ವಿಷಯದಲ್ಲೂ ತೊರವೆ ರಾಮಾಯಣ ನಿರಾಸೆ ಮೂಡಿಸುತ್ತದೆ. ರಾವಣನಂತಹ ಪ್ರತಿ ನಾಯಕರನ್ನು ಶ್ರೇಷ್ಠ ನಾಯಕರಾಗಿ ಬಿಂಬಿಸುವ ಜೈನ ಕಾವ್ಯ ಪರಂಪರೆಯ ಮುಂದುವರಿದ ಭಾಗವಾಗಿ ರಾಮಾಯಣ ದರ್ಶನಂ ಕಾಣುತ್ತದೆ ಎಂದು ವಿಶ್ಲೇಷಿಸಿದರು.
ರಾಮಾಯಣ ದರ್ಶನಂ ಕಾವ್ಯದಲ್ಲಿ ಕುವೆಂಪು ತಮ್ಮ ಕಾಲದ ಹಿಂದಿನ ಕವಿಗಳೊಂದಿಗೆ ಸಂಬಂಧವನ್ನು ಸ್ಥಾಪಿಸಿಕೊಳ್ಳುವ ಪರಂಪರೆಯ ಪ್ರಜ್ಞೆಯನ್ನು ತೋರಿಸಿದ್ದಾರೆ. ಆದರೆ, ಇಂದಿನ ಕವಿಗಳಲ್ಲಿ ಈ ಮನೋಭಾವ ಕಾಣುತ್ತಿಲ್ಲ. ಕಾವ್ಯ ರಚನೆಯಲ್ಲಿ ಮತ್ತೊಬ್ಬ ಕವಿಯಿಂದ ಪ್ರಭಾವ ಹೊಂದುವುದು ದೋಷವಲ್ಲ. ಆದರೆ, ಪ್ರಭಾವವನ್ನು ಬಳಸಿಕೊಂಡು ಸ್ವಂತಿಕೆಯ
ಅಸ್ಮಿತೆ ಗಳಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.