ADVERTISEMENT

ಜಿಲ್ಲೆಯಲ್ಲಿ ರಂಜಾನ್ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 8:10 IST
Last Updated 21 ಆಗಸ್ಟ್ 2012, 8:10 IST

ಶಿವಮೊಗ್ಗ: ವರ್ಷದ 11 ತಿಂಗಳು ಕಾಯಕಕ್ಕೆ ಮೀಸಲಾಗಿಟ್ಟು, ಒಂದು ತಿಂಗಳು ಪೂರ್ತಿ ಉಪವಾಸ ಮಾಡುವ ಮೂಲಕ ಅಲ್ಲಾ ಸ್ಮರಣೆ ಮಾಡುವ ಬಹುದೊಡ್ಡ ರಂಜಾನ್ ಹಬ್ಬವನ್ನು ಸೋಮವಾರ ನಗರದಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.

ಹೊಸ ಉಡುಗೆ ತೊಟ್ಟಿದ್ದ ಸಾವಿರಾರು ಮುಸ್ಲಿಂ ಬಾಂಧವರು ನಗರದ ಸವಳಂಗ ರಸ್ತೆಯ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10ಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಕಿಕ್ಕಿರಿದು ಸೇರಿದ್ದರಿಂದ, ಜಾಗದ ಕೊರತೆ ಉಂಟಾದವರು ರಸ್ತೆಯ ಮೇಲೆ ಮತ್ತು ವಿವಿಧ ಕಟ್ಟಡಗಳ ಆವರಣದಲ್ಲಿಯೇ ನಿಂತು ಪ್ರಾರ್ಥನೆ ಸಲ್ಲಿಸಿದರು.

ಶುಭಾಶಯ ವಿನಿಮಯ
ನಂತರ, ಕೆಲ ಸಮಯ ಇಮಾಮ್ ಖತೀಬ್ ಕುತ್ಬಾ ಪ್ರವಚನ ಆಲಿಸಿದರು. ಮಕ್ಕಳು, ವಯಸ್ಕರರ ಆದಿಯಾಗಿ ಪರಸ್ಪರ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಹಿನ್ನೆಲೆಯಲ್ಲಿ ಡಿವಿಎಸ್‌ಸರ್ಕಲ್‌ನಿಂದ ನೆಹರೂ ಕ್ರೀಡಾಂಗಣದ ಸರ್ಕಲ್‌ವರೆಗಿನ ರಸ್ತೆ ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.

ಪ್ರಾರ್ಥನೆ ಸಲ್ಲಿಸಿದ ಬಳಿಕ ತಮ್ಮ ಹಿತೈಷಿಗಳು, ಸ್ನೇಹಿತರು, ಬಂಧು ಬಳಗದವರ ಮನೆಗಳಿಗೆ ತೆರಳಿ ಸಿಹಿ ತಿಂಡಿ, ಒಣ ಕರ್ಜೂರ, ಒಣ ದ್ರಾಕ್ಷಿ, ಗೋಡಂಬಿ ಮುಂತಾದವುಗಳನ್ನು ಪರಸ್ಪರ ಹಂಚಿಕೊಂಡರು.

ಮೂವತ್ತು ದಿನದ ಉಪವಾಸದ ಬಳಿಕ ರಂಜಾನ್ ತಿಂಗಳಿಗೆ ಅಲ್ವಿದಾ ಹೇಳಿ, ಶವ್ವಾಲ್ ತಿಂಗಳ ಮೊದಲ ಚಂದ್ರದರ್ಶನ ಮೂಲಕ ಉಳ್ಳವರು ಬಡವರಿಗೆ, ಅಸಹಾಯಕರಿಗೆ  ಹಣ, ತಾವು ತಿನ್ನುವ ಉತ್ತಮ ದರ್ಜೆಯ ಧಾನ್ಯ, ಹೊಸ ಬಟ್ಟೆ ದಾನ ಮಾಡುವ ಮೂಲಕ ಹಬ್ಬವನ್ನು ಸಂತಸದಿಂದ ಆಚರಿಸಿದರು.

ರಂಜಾನ್ ಸಂಭ್ರಮ
ತೀರ್ಥಹಳ್ಳಿ ವರದಿ:
ಒಂದು ತಿಂಗಳ ಉಪವಾಸ ವೃತಾಚರಣೆಯ ನಂತರ ಮುಸ್ಲಿಂ ಬಾಂಧವರು ಸೋಮವಾರ ತೀರ್ಥಹಳ್ಳಿಯಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿ ಪರಸ್ಪರ ಶುಭ ಕೋರಿದರು.
ಪಟ್ಟಣದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನೂರಾರು ಮುಸ್ಲಿಂ ಬಾಂಧವರು ಪರಸ್ಪರ ಶುಭ ಕೋರಿದರು. ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ದುರ್ಭಲರಿಗೆ ದಾನ, ಧರ್ಮ ಮಾಡಿ ಹಬ್ಬದ ಮಹತ್ವ ಸಾರಿದರು.ತಾಲ್ಲೂಕಿನ ಇತರೆ ಕಡೆಗಳಲ್ಲಿ ಇರುವ ಮಸೀದಿಗಳಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನಡೆದವು.

ವಿಶೇಷ ಪ್ರಾರ್ಥನೆ
ಹೊಸನಗರ ವರದಿ: ತಾಲ್ಲೂಕಿನಾದ್ಯಂತ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಮಳೆ ಕಾರಣ ಈದ್ಗಾ ಮೈದಾನಕ್ಕೆ ತೆರಳದೇ ಪಟ್ಟಣದ ಜುಮ್ಮಾ ಮತ್ತು ಬದ್ರಿಯಾ ಮಸೀದಿಯಲ್ಲಿ ವಿಶೇಷ ಪ್ರವಚನ ಹಾಗೂ ಪ್ರಾರ್ಥನೆಯನ್ನು ಮುಸ್ಲಿಂ ಬಾಂಧವರು ಸಲ್ಲಿಸಿದರು.

ತಾಲ್ಲೂಕಿನ ಮೇಲಿನ ಬೆಸಿಗೆ, ನಗರ, ನಿಟ್ಟೂರು, ಮಾಸ್ತಿಕಟ್ಟೆ, ಕೋಡೂರು, ಯಡೂರು ಗ್ರಾಮಗಳಲ್ಲಿಯೂ ಸಹ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತಿ- ಭಾವದಿಂದ ಹಬ್ಬವನ್ನು ಆಚರಿಸಿದರು.

ಬಡವರಿಗೆ ದಾನ
ಸೊರಬ ವರದಿ:
ತಾಲ್ಲೂಕಿನಾದ್ಯಂತ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಮಾರ್ಕೇಟ್ ರಸ್ತೆಯ ಅಂಜುಮನ್-ಎ- ಇಸ್ಲಾಹುಲ್ ಮುಸ್ಲಿಮಿನ್ ಜಾಮಿಯ ಮಸೀದಿ, ಕಾನಕೇರಿಯ ಅಹಲೆ ಸುನ್ನತ್ ವಲ್ ಜಾಮಿಯ ಮಸೀದಿ, ಚಿಕ್ಕಪೇಟೆಯ ಖಾದಿಯಾನ ಮಸೀದಿ ಹಾಗೂ ಹೊಸಪೇಟೆ ಬಡಾವಣೆಯ ಶಾಫಿ  ಬದ್ರಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಹಿರಿಯರಿಗೆ ಗೌರ ಸಲ್ಲಿಸಿ, ಬಡವರಿಗೆ ದಾನ ಧರ್ಮಮಾಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಶುಭ ಹಾರೈಕೆ
ಭದ್ರಾವತಿ ವರದಿ
: ಇಲ್ಲಿನ ಮುಸ್ಲಿಂ ಬಾಂಧವರು ತರೀಕೆರೆ ರಸ್ತೆ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಸಂಭ್ರಮದ ರಂಜಾನ್ ಆಚರಿಸಿದರು.

ಜಾಮೀಯ ಮಸೀದಿ ಗುರು ಮಹಮ್ಮದ್ ಸಯ್ಯದ್ ಇಸ್ರತ್ ಮಾತನಾಡಿ `ರಂಜಾನ್ ಉಪವಾಸ ಸಂದರ್ಭದಲ್ಲಿ ಆಚಾರ, ವಿಚಾರ, ಆಹಾರ, ದಾನ, ಧರ್ಮಾಚರಣೆ ಕುರಿತಂತೆ ಕುರಾನ್ ಧರ್ಮಗ್ರಂಥದಲ್ಲಿ ಹೇಳಿರುವ ರೀತಿ ಪಾಲನೆ ಮಾಡಿದಲ್ಲಿ ದೇವರ ಕೃಪೆಗೆ ಪಾತ್ರರಾಗುತ್ತೇವೆ. ಇದೇ ಜೀವನದ ಪರಮ ಗುರಿ~ ಎಂದು ವಿವರಿಸಿದರು.
ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ ಸಹಸ್ರಾರು ಮುಸ್ಲಿಂ  ಬಾಂಧವರುಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಹಾರೈಕೆ ವಿನಿಮಯ ಮಾಡಿಕೊಂಡರು.ಅಂಜುಮನ್ ಅಧ್ಯಕ್ಷ ಪೀರ್‌ಷರೀಫ್ ಸೇರಿದಂತೆ ವಿವಿಧ ಮಸೀದಿ ಸಮಿತಿಗಳ ಮುಖ್ಯಸ್ಥರು, ಗುರುಗಳು ಹಾಜರಿದ್ದರು.

ಶಾಸಕ ಬಿ.ಕೆ. ಸಂಗಮೇಶ್ವರ ಹಾಜರಿದ್ದು, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಪ್ರಾರ್ಥನಾ ಸಭೆ ನಡೆಯುವ ಸ್ಥಳದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಪೊಲೀಸರು ಬಿಗಿ ಬಂದೋಬಸ್ತು ಕ್ರಮ ಜರುಗಿಸಿದ್ದರು. 

ವಿವಿಧೆಡೆ ಆಚರಣೆ
ಸಾಗರ ವರದಿ:
ತಾಲ್ಲೂಕಿನ ವಿವಿಧೆಡೆ ಸೋಮವಾರ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು.

ರಂಜಾನ್ ಅಂಗವಾಗಿ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ತಾಲ್ಲೂಕಿನ ಆನಂದಪುರಂನ ಈದ್ಗಾ ಮೈದಾನಲ್ಲಿ ಸಾಮೂಹಿಕ ಪ್ರಾರ್ಥನೆ ಏರ್ಪಾಟಾಗಿತ್ತು. ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪುಗೆಯ ಮೂಲಕ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯವನ್ನು ಎಲ್ಲೆಡೆ ಕಾಣಬಹುದಾಗಿತ್ತು.


ಮತ್ತಷ್ಟು ಮೆರುಗು
ಕಾರ್ಗಲ್ ವರದಿ:
ಪವಿತ್ರ ರಂಜಾನ್ ಹಬ್ಬವನ್ನು ಕಣಿವೆಯ ಜೋಗದ ಮುಸ್ಲಿಂ ಸಮಾಜದ ಬಂಧುಗಳು ಸೋಮವಾರ ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆಯಿಂದಲೇ ಜೋಗದ ಮಲಬಾರ್ ಕ್ಯಾಂಪ್‌ನಲ್ಲಿ ಇರುವ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ರಂಜಾನ್ ಹಬ್ಬ ಆರಂಭವಾಯಿತು. ಪ್ರಧಾನ ಗುರುಗಳ ಸಾರಥ್ಯದಲ್ಲಿ ಈದ್ ಊಲ್ ಫಿತರ್ ಹಬ್ಬದ ಶ್ರೇಷ್ಠ ಘಟ್ಟವಾದ ವಿಶೇಷ ನಮಾಜಿನಲ್ಲಿ ಕೆಪಿಸಿ ಉದ್ಯೋಗಿಗಳು ಆದಿಯಾಗಿ ಈ ಪ್ರದೇಶದ ಸಮಸ್ತ ಮುಸ್ಲಿಂ ಬಂಧುಗಳು ಭಾಗವಹಿಸಿದ್ದರು.

ಸಿರಿವಂತರು ಮತ್ತು ಮಧ್ಯಮ ವರ್ಗದ ಮುಸ್ಲಿಂ ಸಮಾಜದವರು ಮಸೀದಿ ಪ್ರಾಂಗಣದಲ್ಲಿ  ಹಬ್ಬದ ಉದಾರ ಕೊಡುಗೆಗಳನ್ನು ದುರ್ಬಲ ವರ್ಗದವರಿದಾನ  ನೀಡಿ ಮಾದರಿಯಾಗಿ ನಡೆದು ಕೊಂಡರು.

ರಂಜಾನ್ ಹಬ್ಬ ಆಚರಣೆಗೆ ಸರ್ಕಾರಿ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ ಜೋಗದ ತುಂಬೆಲ್ಲಾ ದೂರದ ಊರುಗಳಿಂದ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಮುಸ್ಲಿಂ ಸಮಾಜದವರೆ ಕಂಡು ಬರುತ್ತಿದ್ದರು. ಇದು ರಂಜಾನ್ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿತ್ತು.

ಕಣಿವೆ ಪ್ರದೇಶದ ಮುಸ್ಲಿಂ ಬಂಧುಗಳಿಗೆ ಕೆಪಿಸಿ ಮುಖ್ಯ ಎಂಜಿನಿಯರ್ ಜಿ. ಹನುಮಂತಪ್ಪ ಮತ್ತು ಬಿ.ಇ. ರಾಜಮುಡಿ, ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾ.ಸಾ. ಸಾಧಿಖ್ ರಂಜಾನ್ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT