ADVERTISEMENT

ಜಿಲ್ಲೆಯ ಪ್ರಥಮ ಪ್ರನಾಳ ಶಿಶು ಜನನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 7:35 IST
Last Updated 13 ಜನವರಿ 2012, 7:35 IST

ಶಿವಮೊಗ್ಗ: ಜಿಲ್ಲೆಯ ಪ್ರಥಮ `ಪ್ರನಾಳ ಶಿಶು~ ನಗರದ ಸಿಟಿ ಆಸ್ಪತ್ರೆಯಲ್ಲಿ ಜ. 5ರಂದು ಜನನವಾಗಿದೆ.
ಸಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಮಲ್ಲೇಶ್ ಹುಲ್ಲಮನಿ ಈ ಬಗ್ಗೆ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜ. 5ರಂದು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯಲಾಗಿದ್ದು, ತಾಯಿ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು ಜನಿಸಿದಾಗ 2.75 ಕೆ.ಜಿ. ತೂಕ ಇತ್ತು ಎಂದು ಹೇಳಿದರು.

ರಾಜ್ಯದ ಕೆಲವೇ ಆಸ್ಪತ್ರೆ ಇಂತಹ ಸೌಲಭ್ಯವಿದ್ದು, ಸಿಟಿ ಆಸ್ಪತ್ರೆಯ ಬಂಜೆತನ ನಿವಾರಣಾ ಕೇಂದ್ರದಲ್ಲಿ ಈ ಗಂಡು ಪ್ರನಾಳ ಶಿಶು ಜನನವಾಗಿದ್ದು ಇದರಿಂದ ದಂಪತಿಗೆ, ಅವರ ಕುಟುಂಬಕ್ಕೆ ಸಂತೋಷವಾಗಿದೆ ಎಂದರು.

ಕಳೆದ ಎಂಟು ತಿಂಗಳ ಹಿಂದೆ ದಂಪತಿ ಬಂದು ತಮಗೆ ಮಕ್ಕಳಾಗದಿರುವ ಬಗ್ಗೆ ಹೇಳಿಕೊಂಡರು. ಅವರನ್ನು ಪರೀಕ್ಷಿಸಿದಾಗ ಸಹಜ ಗರ್ಭಧಾರಣೆ ಸಮಸ್ಯೆ ಇರುವುದು ಕಂಡು ಬಂತು. ದಂಪತಿಗೆ ಈ ಚಿಕಿತ್ಸೆ ಬಗ್ಗೆ ತಿಳಿಸಿದಾಗ ಅವರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡರು. ತಕ್ಷಣ ಭ್ರೂಣತಜ್ಞ ಡಾ.ರವೀಂದ್ರ ನೇತೃತ್ವದ ತಂಡ ಚಿಕಿತ್ಸೆ ಕೈಗೊಂಡರು; ಈಗ ಮಗು ಜನನವಾಗಿದೆ ಎಂದು ವಿವರಿಸಿದರು.

ತಾಯಿಗೆ ರಕ್ತದೊತ್ತಡ ಜಾಸ್ತಿಯಾಗಿದ್ದರಿಂದ ಎಂಟು ತಿಂಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯುವ ಸಂದರ್ಭ ಬಂತು. ಈಗ ಮಗುವಿಗೆ ಸಹಜವಾದ ಚಿಕಿತ್ಸೆಯನ್ನು ನೀಡಲಾಗುವುದು. ಪ್ರನಾಳ ಶಿಶು ಪಡೆಯಲು ಬೇರೆಡೆ ಸುಮಾರು ಎರಡೂವರೆ ಲಕ್ಷ ರೂ ವೆಚ್ಚವಾಗುತ್ತದೆ. ಆದರೆ, ನಮ್ಮ ಆಸ್ಪತ್ರೆಯಲ್ಲಿ ಕೇವಲ 25 ಸಾವಿರ ರೂಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಆಸ್ಪತ್ರೆಯಲ್ಲಿ ಪ್ರನಾಳ ಶಿಶು ಪಡೆಯಲು ಇಚ್ಚಿಸುವವರಿಗೆ ಸಕಲ ಸೌಲಭ್ಯಗಳಿದ್ದು, ವೀರ್ಯ ಬ್ಯಾಂಕ್‌ನ್ನು ಸ್ಥಾಪಿಸಲಾಗಿದೆ. ಬಾಡಿಗೆ ತಾಯಿ ಸೌಲಭ್ಯವೂ ಇದೆ. ಆದರೆ, ಇವೆಲ್ಲವನ್ನೂ ಗೌಪ್ಯವಾಗಿ ಇಡಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಶಶಿಕಲಾ ಮಲ್ಲೇಶ್, ಮಕ್ಕಳ ತಜ್ಞ ಡಾ.ಚಿನ್ಮಯ್, ಡಾ,ಮೂರ್ಕಣ್ಣಪ್ಪ, ಬಯೋಟೆಕ್ನಾಲಜಿಸ್ಟ್ ಮಾನಸ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.