ADVERTISEMENT

ದಸರಾದಲ್ಲಿ ಚಿಣ್ಣರ ಕಲರವ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 15:00 IST
Last Updated 2 ಅಕ್ಟೋಬರ್ 2011, 15:00 IST

ಶಿವಮೊಗ್ಗ: ಒಂದೆಡೆ ಕುದುರೆ ಸವಾರಿ ಮಾಡಲು ದುಂಬಾಲು ಬಿದ್ದ ಮಕ್ಕಳು, ಮತ್ತೊಂದೆಡೆ ಎತ್ತಿನ ಬಂಡೆಯ ಮೇಲೆ ಕಿಕ್ಕಿರಿದು ತುಂಬಿ, ಕೇಕೆ ಹಾಕುತ್ತಿದ್ದ ಚಿಣ್ಣರು, ಇನ್ನೊಂದೆಡೆ ಹಗ್ಗದ ಏಣಿ ಏರಲು ಪೈಪೋಟಿ ನಡೆಸುತ್ತಿರುವ ಸಾಹಸಿ ಮಕ್ಕಳು... ಹೀಗೆ ಎಲ್ಲಿ ನೋಡಿದರಲ್ಲಿ ಮಕ್ಕಳ ಕಲರವ.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮೈದಾನದಲ್ಲಿ ಶನಿವಾರ ನಗರಸಭೆ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ `ಮಕ್ಕಳ ದಸರಾ ಜಾತ್ರೆ~ಯಲ್ಲಿ ಕಂಡುಬಂದ ದೃಶ್ಯಗಳಿವು.

ನಗರದ 75 ಪ್ರೌಢಶಾಲೆಗಳಿಂದ ಸುಮಾರು 12 ಸಾವಿರಕ್ಕೂ ಹೆಚ್ಚು ಶಾಲಾಮಕ್ಕಳು ಬೆಳಿಗ್ಗೆ 9ಕ್ಕೆ ಬೆಕ್ಕಿನ ಕಲ್ಮಠ, ರಾಮಣ್ಣ ಶ್ರೇಷ್ಠಿ ಪಾರ್ಕ್, ಎನ್.ಟಿ. ರಸ್ತೆ ಉರ್ದುಶಾಲೆ, ಮಿಳ್ಳಘಟ್ಟ ಕ್ಲಸ್ಟರ್ ಮೈದಾನ, ಲಕ್ಷ್ಮೀ ಚಿತ್ರಮಂದಿರ, ರವೀಂದ್ರನಗರ ಶಾಲೆ, ಈದ್ಗಾ ಮೈದಾನದಿಂದ ಏಕಕಾಲಕ್ಕೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಜಾಥಾ ನಡೆಸಿದರು.

ನಂತರ ಶಿವಪ್ಪನಾಯಕ ವೃತ್ತದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ವಿ. ಮೇಘನಾ `ಮಕ್ಕಳ ದಸರಾ ಉತ್ಸವ~ಕ್ಕೆ ಚಾಲನೆ ನೀಡಿದರು. ತದನಂತರ ಮಕ್ಕಳು ಮೆರವಣಿಗೆ ಮೂಲಕ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮೈದಾನಕ್ಕೆ ಆಗಮಿಸಿದರು. ಅಲ್ಲಿ `ಮಕ್ಕಳ ದಸರಾ ಜಾತ್ರೆ~ಯನ್ನು ವಿಕಲಚೇತನ ಮಕ್ಕಳು ಉದ್ಘಾಟಿಸಿದರು.

ಕಾಲೇಜು ಆವರಣದಲ್ಲಿ ಮಕ್ಕಳಿಗಾಗಿ ಕುದುರೆ ಸವಾರಿ, ಫನ್‌ಗೇಮ್, ಎತ್ತಿನ ಗಾಡಿ, ಟಾಂಗಾ, ಹಗ್ಗದ ಏಣಿ ಆಟ ಮುಂತಾದ ಕ್ರೀಡೆಗಳು ನಡೆದವು. ಸುಡುವ ಬಿಸಿಲನ್ನು ಲೆಕ್ಕಿಸದೇ ಪಾಲ್ಗೊಂಡ ಮಕ್ಕಳು ಮನಸೋ ಇಚ್ಛೆ ಆಡಿ ಸಂಭ್ರಮಿಸಿದರು.

ಮಕ್ಕಳಿಗಾಗಿಯೇ ವಿಶೇಷವಾಗಿ ತಿಂಡಿ ಅಂಗಡಿ, ಬಲೂನ್ ಅಂಗಡಿ, ಬಳೆ-ಸರಗಳ ಅಂಗಡಿ, ಪುಸ್ತಕ ಮಳಿಗೆ, ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕ ಕೆ.ಜಿ. ಕುಮಾರಸ್ವಾಮಿ, ನಗರಸಭಾ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ವಿಶ್ವನಾಥ, ಸದಸ್ಯ ಎಸ್.ಎನ್. ಚನ್ನಬಸಪ್ಪ, ನಗರಸಭಾ ಮಾಜಿ ಅಧ್ಯಕ್ಷ ಎನ್.ಜೆ. ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್, ಕಲಾವಿದ ಗೋಪಾಲಕೃಷ್ಣ ಕೊಳ್ತಾಯ, ಎದೆ ತುಂಬಿ ಹಾಡುವೆನು ಪ್ರಸಿದ್ಧಿಯ ಆದಿತ್ಯ ಭಾರದ್ವಾಜ್, ಮಕ್ಕಳ ನಾಟಕಕಾರ ಗಜಾನನ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.

ಬಿಸಿಲಿಗೆ ಬತ್ತಿದ ಉತ್ಸಾಹ: ಮಕ್ಕಳ ಜಾತ್ರೆಯಲ್ಲಿ ಅತಿಥಿ ಗಣ್ಯರಿಗೆ ಮಾತ್ರವೇ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಸುಡು ಬಿಸಿಲಲ್ಲೇ ಗಣ್ಯರ ಭಾಷಣ ಕೇಳಬೇಕಾಗಿದ್ದರಿಂದ ಬಹುತೇಕ ಮಕ್ಕಳು ಅಲ್ಲಿಂದ ತಕ್ಷಣ ನಿರ್ಗಮಿಸಿದ ದೃಶ್ಯ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.