ADVERTISEMENT

ಬಿಸಿಲಿನಿಂದ ಬೇಯುತ್ತಿದೆ ಮಲೆನಾಡು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 6:45 IST
Last Updated 20 ಮಾರ್ಚ್ 2012, 6:45 IST

ಶಿವಮೊಗ್ಗ: ಮಲೆನಾಡು ಬಿಸಿಲಿನಿಂದ ಬೇಯುತ್ತಿದೆ. ದಿನದಿನ ಏರುತ್ತಿರುವ ಬಿಸಿಲಿನ ಝಳದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೇಸಿಗೆ ಕಾಲ ಆರಂಭವಾಗಿ ಒಂದು ತಿಂಗಳ ಕೂಡ ಆಗಿಲ್ಲ; ಅಷ್ಟರಾಗಲೇ ಉಷ್ಣಾಂಶ ದಿನದಿಂದ ದಿನಕ್ಕೆ ಏರ ತೊಡಗಿದೆ.

ಸೋಮವಾರ ಈ ವರ್ಷದ ದಾಖಲೆ ಉಷ್ಣಾಂಶ 39.5ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಳೆದ ವರ್ಷದ ದಾಖಲೆಯಾಗಿದ್ದ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ ಮಲೆನಾಡಿನ ಭಾಗದಲ್ಲೇ ತಾಪಮಾನ ಹೆಚ್ಚಿದ್ದು, ಕಳೆದ ಒಂದು ವಾರದಿಂದ 38ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತಲೇ ಇದೆ. ಬಿಸಿಲಿನ ಈ ಪ್ರಖರಕ್ಕೆ ಹೆದರಿ ಜನ ರಸ್ತೆಗೆ ಇಳಿಯಲು ಹಿಂಜರಿಯುತ್ತಿದ್ದಾರೆ. ಮನೆಯಲ್ಲಿಯೂ ಸೆಕೆ ಹೆಚ್ಚಾಗಿದ್ದರಿಂದ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಜನ ದಿಕ್ಕುತೋಚದಂತಾಗಿದ್ದಾರೆ. ಹಗಲು- ರಾತ್ರಿ ಎನ್ನದೇ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸ್ವಚ್ಛಗೊಳಿಸದ ನಗರಸಭೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಬಿಸಿಲ ಧಗೆಗೆ ಸ್ವಲ್ಪಮಟ್ಟಿಗಾದರೂ ತಪ್ಪಿಸಿಕೊಳ್ಳಲು ಶಿವಮೊಗ್ಗದಲ್ಲಿ ಮರಗಳಿರುವ ಒಂದೇ ಒಂದು ಒಳ್ಳೆಯ ಉದ್ಯಾನವನ ಇಲ್ಲ. ಬಿಸಿಲಿನಿಂದ ರಕ್ಷಣೆ ಪಡೆಯಲು ಇರುವ ಏಕೈಕ ಗಾಂಧಿಪಾರ್ಕ್ ಕೂಡ ಈಗ ರಿಪೇರಿಯಿಂದ ಅದೂ ಹದಗೆಟ್ಟಿದೆ. ವಿವಿಧ ಕೆಲಸ-ಕಾರ್ಯಗಳಿಗೆ ಶಿವಮೊಗ್ಗ ನಗರಕ್ಕೆ ಬರುವವರಿಗೆ ಈಗ ಬಿಸಿಲಲ್ಲೇ ಬೇಯುವ ಪರಿಸ್ಥಿತಿ ಎದುರಾಗಿದೆ. 

ಕಳೆದ ಐದಾರು ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ನಿರಂತರವಾಗಿ ಮರಗಳ ಮಾರಣಹೋಮ ಮುಂದುವರಿದಿದೆ. ಜತೆಗೆ ಹೆಚ್ಚಾದ ವಾಹನಗಳು ಹೊರಬಿಡುವ ಹೊಗೆಯಿಂದಾಗಿ ವಾತಾವರಣದಲ್ಲಿ ಬಿಸಿ ಹೆಚ್ಚಾಗಿದೆ. ಅಲ್ಲದೇ, ಶಾಖವನ್ನು ಪ್ರತಿಫಲಿಸುವ ಸಿಮೆಂಟ್ ರಸ್ತೆ, ಡಾಂಬರ್ ರಸ್ತೆ, ಗಗನಚುಂಬಿ ಕಟ್ಟಡಗಳಿಂದಲೂ ತಾಪಮಾನ ಹೆಚ್ಚಾಗಲು ಕಾರಣವಾಗಿದೆ.

ನಗರದ ಚರಂಡಿಗಳು ಕಸ-ಕಡ್ಡಿಗಳಿಂದ ತುಂಬಿಕೊಂಡಿವೆ. ಇದು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ. ಬಿಸಿಲಿನ ಧಗೆ ಜತೆಗೆ ಸೊಳ್ಳೆಗಳ ಕಾಟ ನೆಮ್ಮದಿ ಹಾಳು ಮಾಡಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಾಜೇಂದ್ರನಗರದ ಸುರೇಶ್ ಶೆಣೈ.

ಮೂರ‌್ನಾಲ್ಕು ಬಾರಿ ಮಳೆ ಬಂದರೆ ಸದ್ಯದ ಬಿಸಿಲಿನ ಸಂಕಷ್ಟದಿಂದ ಪಾರಾಗಬಹುದು. ಇಲ್ಲದಿದ್ದರೆ ಬದುಕು ಇನ್ನಷ್ಟು ಅಸಹನೀಯವಾಗುತ್ತದೆ ಎಂಬ ಅಭಿಪ್ರಾಯ ಹಿರಿಯ ನಾಗರಿಕ ಗಣಪತಿರಾವ್ ಅವರದ್ದು.

ಸುಡುವ ಬಿಸಿಲನ್ನು ಸ್ವಲ್ಪ ತಂಪಾಗಿಸಿಕೊಳ್ಳುವ ನಮ್ಮ ಪ್ರಯತ್ನಕ್ಕೂ ತಣ್ಣೀರಲ್ಲ, ಬಿಸಿನೀರೆ ಎರಚಲಾಗುತ್ತಿದೆ.

ಪಾನಕ ಮಾಡಿಕೊಂಡು ಕುಡಿಯಲು ಹೋದರೆ ಒಂದು ನಿಂಬೆ ಹಣ್ಣಿನ ಬೆಲೆ ್ಙ 5ಗೆ ಏರಿದೆ. ಕಲ್ಲಂಗಡಿ ಹಣ್ಣು ಕೆ.ಜಿ.ಗ್ಙೆ  20 ದಾಟಿದೆ. ಮಜ್ಜಿಗೆ ಮುಟ್ಟಲಾರದಷ್ಟು ಬೆಲೆ ಆಗಿದೆ. ಕನಿಷ್ಠ ಒಳ್ಳೆಯ ನೀರು ಕುಡಿಯಲೂ ನಗರಸಭೆ ಪ್ರತಿ ದಿವಸ ನೀರು ಬಿಡುತ್ತಿಲ್ಲ ಎಂಬ ನೋವು ಗೃಹಿಣಿ ವಿಜಯಾ ಅವರದ್ದು.

ಹೆಚ್ಚಿದ ತಾಪಮಾನ ಅಡಿಕೆ ಬೆಳೆ ಮೇಲೂ ಪರಿಣಾಮ ಬೀರುತ್ತಿದೆ. ಅಡಿಕೆ ಹೊಂಬಾಳೆಗೆ 28ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಬೇಕು. ಆದರೆ, ಈಗ ಹೆಚ್ಚಿದ್ದು, ಹೊಂಬಾಳೆ ಒಣಗಿ ಅಡಿಕೆ ಇಳುವರಿ ಸಂಪೂರ್ಣ ಕುಸಿಯಲಿದೆ. ರೇಷ್ಮೆ ಹುಳುಗಳು ಈ ಬಿಸಿಲಿನಲ್ಲಿ ಉಳಿಯುವುದು ಕಷ್ಟ. ಕುರಿಗಳಿಗೆ ಕಾಯಿಲೆ ಬರುತ್ತವೆ.
 
ಮಿಶ್ರ ತಳಿಗಳ ಹಾಲಿನ ಉತ್ಪಾದನಾ ಪ್ರಮಾಣವು ಕುಸಿಯುತ್ತದೆ. ಹೆಚ್ಚುತ್ತಿರುವ ಈ ತಾಪಮಾನ ರೈತರಿಗೆ ಆದಾಯ ತರುವ ಉಪಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎನ್ನುತ್ತಾರೆ ರೈತ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.