ADVERTISEMENT

ಮಹಿಳೆಯರಿಗಾಗಿ ಗಾರ್ಮೆಂಟ್‌ ನಿರ್ಮಾಣ: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 8:30 IST
Last Updated 6 ಅಕ್ಟೋಬರ್ 2017, 8:30 IST

ಶಿರಾಳಕೊಪ್ಪ: ತಾಲ್ಲೂಕಿನ ಬಡ ಮಹಿಳೆಯರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಶೀಘ್ರವೇ ಗಾರ್ಮೆಂಟ್‌ ತೆರೆಯಲಾಗುವುದು ಎಂದು ಶಾಸಕ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು. ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಮಂಜೂರಾಗಿರುವ ಕಾಂಕ್ರೀಟ್‌ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸಂಸದ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಯ ಶಾಹೀ ಎಕ್ಸ್‌ಪೋರ್ಟ್‌ ಕಂಪೆನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ, ಎರಡು ತಿಂಗಳಲ್ಲಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

‘ಈ ಭಾಗದ ಐತಿಹಾಸಿಕ ತಾಣಗಳಾದ ತಾಳಗುಂದ, ಬಳ್ಳಿಗಾವಿ, ಉಡುಗಣಿ ಸೇರಿದಂತೆ ಸಮಗ್ರ ತಾಲ್ಲೂಕನ್ನು ಆಕರ್ಷಕ ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಡಿಸಲು ಕೇಂದ್ರದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಬಂದು ಯೋಜನೆ ರೂಪಿಸಲಿದೆ. ತಾಳಗುಂದ, ಉಡುಗಣಿ ಹಾಗೂ ಹೊಸೂರು ಹೋಬಳಿ ಕೆರೆಗಳಿಗೆ ನೀರು ತುಂಬುವ ಯೋಜನೆಯನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ಡಿಸಿಸಿ ಬ್ಯಾಂಕ್ ನಿರ್ದೇಶಕ ಅಗಡಿ ಅಶೋಕ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ್ಯ ಭಾರತಿರಾಜು, ಉಪಾಧ್ಯಕ್ಷ ರಶೀದಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್‌ ಅಲಿ, ಸದಸ್ಯರಾದ ರಟ್ಟೀಹಳ್ಳಿ ಲೋಕೇಶ್‌, ಮಹಾಬಲ, ಗೀತಾ ಕೇದಾರೇಶ್ವರ, ಮಹಿಳಾ ಹಾಲು ಉತ್ಪಾದಕರ ಸಂಘದ ನಿರ್ದೇಶಕಿ ನಿವೇದಿತಾ ರಾಜು, ಎಪಿಎಂಸಿ
ಅಧ್ಯಕ್ಷ ತಾಳಗುಂದ ಸತೀಶ್, ವಸಂತಮ್ಮ ಜೋಗು ಭಂಡಾರಿ, ಮುಖ್ಯಾಧಿಕಾರಿ ಸುರೇಶ್ ಹಾಜರಿದ್ದರು. ಶಿವಾನಂದ ಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.