ADVERTISEMENT

ರಂಗಾಯಣ ಸಬಲೀಕರಣಕ್ಕೆ ಸಹಕಾರ- ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 9:55 IST
Last Updated 14 ಅಕ್ಟೋಬರ್ 2011, 9:55 IST

ಶಿವಮೊಗ್ಗ: ರಂಗಾಯಣದ ಸಬಲೀಕರಣಕ್ಕೆ ಸಕಲ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಭರವಸೆ ನೀಡಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಶಿವಮೊಗ್ಗ ರಂಗಾಯಣ ಉದ್ಘಾಟಿಸಿ ಅವರು ಮಾತನಾಡಿದರು.

ಕಲಾ ಚಟುವಟಿಕೆಗಳು ಮನುಷ್ಯನ ಮನಸ್ಸಿಗೆ ಮುದ ನೀಡುತ್ತವೆ. ಒತ್ತಡದಿಂದ ಹೊರಬರಲು ಮನುಷ್ಯನಿಗೆ ಕಲಾ ಚಟುವಟಿಕೆಗಳು ಅತ್ಯಗತ್ಯ. ರಾಜಕಾರಣದಲ್ಲೂ ನಟನೆ ಮಾಡುವುದು ಒಂದು ಕಲೆ. ಅದನ್ನು ರಾಜಕಾರಣಿಗಳು ಚೆನ್ನಾಗಿ ಕರಗತ ಮಾಡಿಕೊಂಡಿರುತ್ತಾರೆ ಎಂದು ಅವರು ಹಾಸ್ಯಚಟಾಕಿ ಹಾರಿಸಿದರು.

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ರಂಗಾಯಣ ಎಂದರೆ ಜನಪರ ನಾಟಕ ಎಂಬ ಭಾವನೆ ಇದೆ. ರಂಗಾಯಣ ಜನಪ್ರಿಯವೂ ಆಗಬೇಕು ಜತೆಗೆ ಜನಮುಖಿ, ಸಮಾಜಮುಖಿ ನಾಟಕಗಳ ಪ್ರದರ್ಶನಕ್ಕೆ ಒತ್ತು ನೀಡಬೇಕು ಎಂದರು.

ರಂಗಾಯಣ ಕಲಾ ಶಿಕ್ಷಣ ನೀಡುವ ಜತೆಗೆ,ಕಲಾವಿದರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಚಿಂತಿಸಬೇಕು. ಕಲಾವಿದರಿಗೆ ಬದುಕಿನ ಭದ್ರತೆ ಕೂಡಾ ಮುಖ್ಯ. ಈ ನಿಟ್ಟಿನಲ್ಲಿ ರಂಗಾಯಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ನಾಟಕ ಆಂದೋಲನ ಆರಂಭ ಮಾಡಿದಲ್ಲಿ ಕನ್ನಡ ಭಾಷೆಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಶಿವಮೊಗ್ಗ ರಂಗಾಯಣದ ನಿರ್ದೇಶಕ ಹೊ.ನ. ಸತ್ಯ ಅವರು ಸಾವಿರ ಮಕ್ಕಳ ನಾಟಕಗಳನ್ನು ಆಡಿಸುವ ಮೂಲಕ ರಾಜ್ಯದ ಮೂಲೆ ಮೂಲೆಗೆ ರಂಗಚಟುವಟಿಕೆ ತಲುಪಿಸುವ ಗುರಿ ಹೊಂದಿರುವುದು ಉತ್ತಮ ಯೋಜನೆ ಎಂದರು. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.  

ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕೆ.ಜಿ. ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹೆಗ್ಗೋಡಿನ ಮಹಿಳಾ ಕಲಾವಿದರ ಡೊಳ್ಳುತಂಡ ಮುಖ್ಯಮಂತ್ರಿ ಸೇರಿದಂತೆ ಅತಿಥಿಗಳನ್ನು ಸ್ವಾಗತಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.