ADVERTISEMENT

ಸಮಸ್ಯೆಗೆ ಸ್ಪಂದಿಸಲು ಯುವಕರಿಗೆ ಕರೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST
ಸಮಸ್ಯೆಗೆ ಸ್ಪಂದಿಸಲು ಯುವಕರಿಗೆ ಕರೆ
ಸಮಸ್ಯೆಗೆ ಸ್ಪಂದಿಸಲು ಯುವಕರಿಗೆ ಕರೆ   

ಶಿವಮೊಗ್ಗ: ತಂತ್ರಜ್ಞಾನ ಯುಗದಲ್ಲಿ ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧಗಳ ವ್ಯಾಖ್ಯಾನ ಬದಲಾಗಿದೆ. ಎಲ್ಲವೂ ವ್ಯಾಪಾರಿ ಮನೋಭಾವದ ರೂಪ ಪಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಬೇಸರ ವ್ಯಕ್ತಪಡಿಸಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ರಾಜ್ಯ ಗೆಳೆಯರ ಬಳಗ ಸಂಘಟನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅವಸರದ ಜಗತ್ತಿನಲ್ಲಿ ಮಾನವ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸ್ನೇಹ, ಪ್ರೀತಿ ಮತ್ತಿತರ ಸಂಬಂಧಗಳು ವ್ಯವಹಾರಿಕವಾಗಿದ್ದು, ಲಾಭ-ನಷ್ಟಗಳ ಮೇಲೆ ರೂಪುಗೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದರು.ಈ ನಿಟ್ಟಿನಲ್ಲಿ ಹದಗೆಡುತ್ತಿರುವ ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ಯುವಪೀಳಿಗೆ ಮೇಲಿದೆ. ಯುವಕರು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ, ಸಮಾಜದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

ರಾಜಕಾರಣದಲ್ಲಿ ಬರೀ ಭ್ರಷ್ಟರೇ ಇಲ್ಲ. ಅದರಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಸದಾಚಾರ, ಸನ್ನಡತೆಯನ್ನು ಹೊಂದಿದ, ಪ್ರಾಮಾಣಿಕವಾಗಿರುವವರು ಇದ್ದಾರೆ. ಆದ್ದರಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ, ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಆದರೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಒಳ್ಳೆಯವರೂ ಇದ್ದಾರೆ ಎಂಬ ಸಮಾಧಾನ ನಮಗಿರಬೇಕು ಎಂದರು.
 

ಎಲ್ಲ ಸಮಸ್ಯೆಗಳನ್ನೂ ಸರ್ಕಾರವೇ ಪರಿಹರಿಸಲು ಸಾಧ್ಯವಿಲ್ಲ; ಸಹಕಾರ ನೀಡಬಹುದಷ್ಟೇ. ಸ್ಥಳೀಯ ಸಂಘಟನೆಗಳು ಆಯಾ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ರಾಜ್ಯ ಗೆಳೆಯರ ಬಳಗ ಉದ್ಘಾಟಿಸಿ ಮಾತನಾಡಿದರು. ಚಿತ್ರನಟ ಆರ್ಯ, ಸಂಸ್ಥೆ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಪದಾಧಿಕಾರಿಗಳಾದ ವಿನ್ಸೆಂಟ್ ರೋಡ್ರಿಗಸ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮಣಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT