ಸಾಗರ: ಶಿಕಾರಿಪುರವನ್ನು ಜಿಲ್ಲಾ ಕೇಂದ್ರವಾಗಿ ಮಾಡುವ ಪ್ರಸ್ತಾಪ ಸದ್ಯಕ್ಕೆ ಇಲ್ಲ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿರುವುದನ್ನು ನೋಡಿದರೆ ಶಿಕಾರಿಪುರವನ್ನು ಜಿಲ್ಲಾ ಕೇಂದ್ರವಾಗಿ ಮಾಡಲು ತೆರೆಮರೆಯಲ್ಲಿ ಪ್ರಯತ್ನ ನಡೆದಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೂರಿದರು.
ಸಾಗರ ಸಮೂಹ ಜನ ಜಾಗೃತ ವೇದಿಕೆ ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಪರಿವರ್ತಿಸಬೇಕು ಎಂದು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು.
ಒಂದೆಡೆ ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸುವುದಿಲ್ಲ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದರೆ ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸತ್ ಸದಸ್ಯ ರಾಘವೇಂದ್ರ ಶಿಕಾರಿಪುರದಲ್ಲಿ ವಿವಿಧ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಜಿಲ್ಲಾ ರಚನೆ ಪ್ರಕ್ರಿಯೆಯಲ್ಲಿ ಗುಟ್ಟಾಗಿ ತೊಡಗಿದ್ದಾರೆ ಎಂದು ಆಪಾದಿಸಿದರು.
ಸಾಗರ ಒಂದು ಉಪ ವಿಭಾಗೀಯ ಕೇಂದ್ರವಾಗಿದೆ. ಅಲ್ಲದೇ, ಜಿಲ್ಲಾ ಕೇಂದ್ರವಾಗಲು ಅಗತ್ಯವಿರುವ ಎಲ್ಲ ಮೂಲ ಸೌಕರ್ಯ ಹೊಂದಿದೆ. ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ನೋಡಿದರೂ ಸಾಗರವೆ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳ. ಆದ್ದರಿಂದ, ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂಬ ಬೇಡಿಕೆ ನ್ಯಾಯ ಸಮ್ಮತವಾದದ್ದು ಎಂದರು.
ಸಾಗರವನ್ನು ಜಿಲ್ಲಾ ಕೇಂದ್ರ ಎಂದು ಘೋಷಿಸಬೇಕೆಂದು ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಹಕ್ರೆ, ರಾಜಶೇಖರ ಗಾಳಿಪುರ, ಕಾಂಗ್ರೆಸ್ ಮುಖಂಡರಾದ ಹೊಳಿಯಪ್ಪ, ತೀ.ನಾ. ಶ್ರೀನಿವಾಸ್, ಹೊನಗೋಡು ರತ್ನಾಕರ, ಸುಮಿತ್ರಮ್ಮ, ಪ್ರಕಾಶ್ ಲ್ಯಾವಿಗೆರೆ, ಮಹಾಬಲೇಶ್ವರ ಕುಗ್ವೆ, ರವಿ ಜಂಬೂರಮನೆ, ಸುಂದರ್‌ಸಿಂಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.