ADVERTISEMENT

ಹಿಂದುಳಿದವರ ಅಭಿವೃದ್ಧಿಗೆ ಸರ್ಕಾರ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 8:10 IST
Last Updated 15 ಆಗಸ್ಟ್ 2012, 8:10 IST

ಸಾಗರ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರಿಗೆ ರಾಜ್ಯ ಸರ್ಕಾರ ವಿವಿಧ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಸಕ್ರಿಯವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲ್ಲೂಕಿನ ಆಚಾಪುರ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಲೊನಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ  ಅವರು ಮಾತನಾಡಿದರು.

ಕಾಂಗ್ರೆಸ್ ಈವರೆಗೆ ದಲಿತರನ್ನು ಕೇವಲ ಓಟ್‌ಬ್ಯಾಂಕ್ ಆಗಿ ಬಳಸಿಕೊಂಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.

ADVERTISEMENT

ಅಂದಾಸುರ ಗ್ರಾಮದಲ್ಲಿ ರೂ. 20 ಲಕ್ಷ  ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು. ಆಚಾಪುರ ನವಗ್ರಾಮದಲ್ಲಿ ರೂ. 1.50 ಲಕ್ಷ   ವೆಚ್ಚದಲ್ಲಿ ಕೊಳವೆ ಬಾವಿ ತೋಡಲಾಗುವುದು. ಗಿಳಲಗುಂಡಿ- ಲಕ್ಕವಳ್ಳಿ ನಡುವೆ ಶೀಘ್ರವಾಗಿ ಹೊಸ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಆಶ್ರಯ ನಿವೇಶನ ಹಾಗೂ ಮನೆಗಳ ಹಕ್ಕುಪತ್ರ ವಿತರಣೆ ಕಾರ್ಯ ಸದ್ಯದಲ್ಲಿಯೆ ಆರಂಭಗೊಳ್ಳಲಿದೆ. ಬಗರ್‌ಹುಕುಂ ಪ್ರಕರಣಗಳ ಇತ್ಯರ್ಥ ತ್ವರಿತ ಗತಿಯಲ್ಲಿ ಆಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಆಚಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ್, ಶಾಂತಕುಮಾರ್, ಶಾಹಿದಾ ಬೇಗಂ, ರವಿ, ದಾಕ್ಷಾಯಿಣಿ, ಗೌತಮ್, ರಾಜೀವ್, ಉಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.