ADVERTISEMENT

‘ಹೆಣ್ಣಿನ ಘನತೆಗೆ ಶಿಕ್ಷಣವೇ ಭೂಷಣ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:58 IST
Last Updated 9 ಡಿಸೆಂಬರ್ 2013, 8:58 IST

ಸೊರಬ: ಸ್ತ್ರೀಯರು ಹೆಚ್ಚಿನ ಶಿಕ್ಷಣ ಗಳಿಸಿ, ಉನ್ನತ ಸ್ಥಾನ ಪಡೆದಾಗ ಸಮಾಜವು ಅವಳಿಗೆ ಘನತೆ ಗೌರವ ನೀಡುತ್ತದೆ ಎಂದು ಸಮಾಜ ಸೇವಕಿ ಶೇಖರಮ್ಮ ರಾಜಪ್ಪ ಮಾಸ್ತರ್ ತಿಳಿಸಿದರು.

ಪಟ್ಟಣದ ದಾರಸ್ಸಲಾಂ ಶಾಹದಿ ಮಹಲ್‌ನಲ್ಲಿ ಗರ್ಲ್ಸ್‌ ಇಸ್ಲಾಮಿಕ್ ಆರ್ಗನೈಜೈಷನ್ಸ್‌ ಆಫ್‌  ಇಂಡಿಯಾ ವತಿಯಿಂದ ಈಚೆಗೆ ಘನತೆ–ನನ್ನ ಹಕ್ಕು–ನನ್ನ ಹೊಣೆಗಾರಿಕೆ ಎಂಬ ವಿಷಯವಾಗಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ  ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ತಾಯಿ, ಪತ್ನಿ, ಮಗಳು ಅಥವಾ ಸಹೋದರಿಯ ರೂಪದಲ್ಲಿನ ಹೆಣ್ಣಿನ ಬಾಂಧವ್ಯ ಹಳಸುತ್ತಿದ್ದು,  ವೇಗವಾಗಿ ಹಬ್ಬುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಯುವಜನತೆಯ ವಿಚಾರಗಳನ್ನು ಕೆಡಿಸುತ್ತಿರುವುದು ಅದಕ್ಕೆ ಕಾರಣವಾಗಿದೆ. ಆದರೂ ಸ್ವಭಾವತಃ ಅಬಲೆಯಾಗಿರುವ ಮಹಿಳೆ ತನ್ನ ಘನತೆಯನ್ನು ಹೆಚ್ಚಿಸುವುದನ್ನು ಚೆನ್ನಾಗಿ ಬಲ್ಲಳು ಎಂದ ಅವರು, ಇಂದಿನ ದಿನಗಳಲ್ಲಿ ಹೆಣ್ಣು ಇನ್ನಷ್ಟು ಶಿಕ್ಷಣ ಪಡೆಯುವುದರ ಮೂಲಕ ತಾನು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡಿಸಬೇಕಿದೆ ಎಂದರು.

ನಾಲ್ಕು ಗೋಡೆಗಳ ನಡುವೆ ಸಂಸ್ಕಾರವನ್ನು ಕಲಿಸುವ ಹೆಣ್ಣು ಸಮಾಜದ ನಡುವೆಯೂ ಪ್ರಮುಖ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲಳು ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ ಎಂದ ಅವರು, ಕುಟುಂಬವು ಅವಳ ಏಳ್ಗೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಜಿಐಒ ಸ್ಥಾನೀಯ ಕಾರ್ಯದರ್ಶಿ ಸಾಕಿಭಾ ಶರೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಸ್ವತಃ ತನ್ನ ಗೌರವ ಕಾಪಡಿಕೊಂಡು ಪ್ರಾಮಾಣಿಕ ಹಕ್ಕುಗಳಿಗಾಗಿ ಹೋರಾಡಬೇಕು. ಈ ನಿಟ್ಟಿನಲ್ಲಿ ದೇವಭಯ ಮತ್ತು ಪರಲೋಕ ವಿಶ್ವಾಸದಿಂದ ಸ್ವಚ್ಛಂದದ ಬದುಕನ್ನು ಪ್ರತಿಷ್ಠೆಗಾಗಿ ಮತ್ತು ಹಣ ಗಳಿಕೆಗಾಗಿ ಸಾಗಿಸದೇ ತಾನು ತಾಯಿ ಎಂಬ ಹೊಣೆಗಾರಿಕೆ ಅರಿತು ಬಾಳಬೇಕು ಎಂದು  ಅವರು ಅಭಿಪ್ರಾಯಪಟ್ಟರು.

ಪ್ರಜಾಪಿತ ಬ್ರಹ್ಮ ಕುಮಾರಿ ಸಂಸ್ಥೆಯ ಚೇತನಾ ಮಾತನಾಡಿದರು. ನಾಝೀಮಾ, ಬೇಬಿ ಆಯಿಷಾ, ಸಮೀನಾ, ಅಫ್ಸಾನ, ತಹ್ಸೀನಾ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.