ADVERTISEMENT

ಲಿಂಗನಮಕ್ಕಿ: 28 ಅಡಿ ಹೆಚ್ಚುವರಿ ನೀರು ಸಂಗ್ರಹ

ಜಲಾಶಯಕ್ಕೆ ಹಿಂದಿನ ಸಾಲಿಗಿಂತ ಉತ್ತಮ ಒಳಹರಿವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 13:06 IST
Last Updated 16 ಜುಲೈ 2024, 13:06 IST
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಿರುವುದು
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಿರುವುದು   

ಕಾರ್ಗಲ್: ರಾಜ್ಯದ ಜಲವಿದ್ಯುತ್ ಯೋಜನೆಗಳ ಪೂರಕ ಶಕ್ತಿಯಾದ ಲಿಂಗನಮಕ್ಕಿ ಜಲಾನಯನ ಪ್ರದೇಶದ ಹಿನ್ನೀರ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಣೆಕಟ್ಟೆಯಲ್ಲಿ ಹಿಂದಿನ ಸಾಲಿಗಿಂತ 28 ಅಡಿ ಹೆಚ್ಚುವರಿ ನೀರು ಸಂಗ್ರಹವಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಮೂಲಗಳು ತಿಳಿಸಿದೆ.

ಹಿಂದಿನ ಬಾರಿ ಇದೇ ಅವಧಿಯವರೆಗೆ ಒಟ್ಟು 901 ಮಿ.ಮೀ. ಮಳೆ ಸುರಿದು, 1,755.90 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಈವರೆಗೆ 1,797 ಮಿ,ಮೀ, ಮಳೆ ಸುರಿದಿದ್ದು, 1,782.15 ಅಡಿ ನೀರು ಜಲಾಶಯದಲ್ಲಿ ಭರ್ತಿಯಾಗಿದೆ.

ಸಮುದ್ರ ಮಟ್ಟದಿಂದ 1,819 ಅಡಿ ಎತ್ತರದವರೆಗೆ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಅಣೆಕಟ್ಟೆ 1,992 ಚ.ಕಿ.ಮೀ ಹಿನ್ನೀರ ವ್ಯಾಪ್ತಿಯನ್ನು ಹೊಂದಿದೆ. ಈ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರವಾದ ಮಳೆಯಿಂದ ಕಳೆದ 24 ಗಂಟೆಗಳಲ್ಲಿ 77,911 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ.

ADVERTISEMENT

ಜಲಾಶಯದಿಂದ ಹೊರ ಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ನೀರನ್ನು ಉಪಯೋಗಿಸಿಕೊಂಡು ಲಿಂಗನಮಕ್ಕಿ, ಶರಾವತಿ, ಮಹಾತ್ಮ ಗಾಂಧಿ, ಟೈಲ್ ರೇಸ್ ಜಲವಿದ್ಯುತ್ ಯೋಜನೆಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.