ADVERTISEMENT

518 ಸ್ವತ್ತು ಕಳವು ಪ್ರಕರಣಗಳು; ವಾರಸುದಾರರಿಗೆ ₹ 3.3 ಕೋಟಿ ಮೌಲ್ಯದ ಸ್ವತ್ತು

₹ 6.23 ಕೋಟಿ ಮೌಲ್ಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 7:03 IST
Last Updated 19 ನವೆಂಬರ್ 2021, 7:03 IST
ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಸ್ವತ್ತುಗಳನ್ನು ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಗುರುವಾರ ವಾರಸುದಾರರಿಗೆ ವಿತರಿಸಲಾಯಿತು.
ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಸ್ವತ್ತುಗಳನ್ನು ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಗುರುವಾರ ವಾರಸುದಾರರಿಗೆ ವಿತರಿಸಲಾಯಿತು.   

ಶಿವಮೊಗ್ಗ: ಕಳವು, ದರೋಡೆ, ಸುಲಿಗೆ ಪ್ರಕರಣಗಳಿಂದ ಚಿನ್ನ, ಬೆಳ್ಳಿ, ಮೊಬೈಲ್‌, ಬೈಕ್‌ ಇತರೆ ಸ್ವತ್ತುಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಅವುಗಳನ್ನು ಹಿಂದಿರುಗಿಸುವ ಮೂಲಕ ಜಿಲ್ಲಾ ಪೊಲೀಸರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 518 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿದ್ದವು. ₹ 6.23 ಕೋಟಿ ಕಳವು ಮಾಡಿದ್ದ ಮೌಲ್ಯ. ಅದರಲ್ಲಿ
₹ 3.3 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಸ್ವತ್ತುಗಳನ್ನು ವಾರಸುದಾರರಿಗೆ ಮರಳಿಸಲಾಗಿದೆ ಎಂದು ಡಿಎಆರ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಸ್ವತ್ತುಗಳನ್ನು ವಾರಸುದಾರರಿಗೆ ಬಿಟ್ಟುಕೊಡುವ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದರು.

518 ಸ್ವತ್ತು ಕಳವು, 6 ದರೋಡೆ ಪ್ರಕರಣ, 54 ಸುಲಿಗೆ ಪ್ರಕರಣ, 151 ಕನ್ನ ಕಳವು ಪ್ರಕರಣ ಸೇರಿರುತ್ತವೆ. ಇದರಲ್ಲಿ ಒಟ್ಟು 231 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ₹ 1.22 ಕೋಟಿ ಮೌಲ್ಯ ಎಂದು ಅಂದಾಜಿಸಲಾಗಿದೆ. ಒಟ್ಟು 2 ಕೆ.ಜಿ. 879 ಗ್ರಾಂ ಬಂಗಾರದ ಆಭರಣಗಳು, 14,394 ಗ್ರಾಂ ಬೆಳ್ಳಿ ಆಭರಣಗಳು, 73 ವಾಹನಗಳು, 27 ಮೊಬೈಲ್ ಫೋನ್‌ಗಳು, 6 ಜಾನುವಾರು, 39 ಕ್ವಿಂಟಲ್ ಅಡಿಕೆ, ಎಲೆಕ್ಟ್ರಾನಿಕ್ ವಸ್ತು ಹಾಗೂ ಇತರ ವಸ್ತುಗಳು ಸೇರಿ ₹ 3.3 ಕೋಟಿ ಮೌಲ್ಯದ ಸ್ವತ್ತು ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲಾ ಪೊಲೀಸ್ ಕಳವು ಪ್ರಕರಣಗಳಲ್ಲಿ ಕೂಡಲೇ ಸ್ಪಂದಿಸಿ ಹಲವು ತಂಡಗಳ ರಚನೆ ಮಾಡಿ ಕಾರ್ಯಾಚರಣೆ ನಡೆಸಿ, ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಅಡಿಕೆ ಕಳವು ಪ್ರಕರಣಗಳು ನಡೆಯುತ್ತಿವೆ. ಈವರೆಗೆ ಒಟ್ಟು 928 ಪ್ರಕರಣಗಳು ದಾಖಲಾಗಿವೆ. ಮೊಬೈಲ್ ಕಳವು ಪ್ರಕರಣಗಳನ್ನು ಕಂಡುಹಿಡಿದಿದ್ದೇವೆ. ಬಿಡುಗಡೆಯಾದ ನಂತರ ಪುನಃ ಕಳವು ಮಾಡುತ್ತಿದ್ದ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಹೊರ ರಾಜ್ಯದವರು ಇದ್ದಾರೆ. ಚಿಕ್ಕಮರಡಿ, ಭದ್ರಾವತಿ, ಶಿವಮೊಗ್ಗದ ಸೇರಿ 8 ಡಕಾಯಿತಿ ಪ್ರಕರಣಗಳನ್ನು ಭೇದಿಸಲಾಗಿದೆ. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ 177 ದ್ವಿಚಕ್ರ ಮತ್ತು 4 ಚಕ್ರದ ವಾಹನ ಕಳವು ಮಾಡಲಾಗಿತ್ತು. 78 ಪ್ರಕರಣಗಳನ್ನು ಭೇದಿಸಲಾಗಿದೆ. ಪೌರಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣದ 9 ಜನರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಹಣಗೆರೆ ಕಟ್ಟೆ ಪ್ರಕರಣದಲ್ಲೂ ಮಾಹಿತಿ ಲಭ್ಯವಾಗಿದೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಈಶ್ವರ ನಾಯ್ಕ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.