ADVERTISEMENT

ನಿರಂತರ ಕುಡಿಯುವ ನೀರು ಪೂರೈಸಲು ₹ 96.50 ಕೋಟಿ ಯೋಜನೆ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 28 ಮೇ 2021, 10:28 IST
Last Updated 28 ಮೇ 2021, 10:28 IST
   

ಶಿವಮೊಗ್ಗ: ನಗರದ ಹೊರವಲಯದ ಹೊಸ ಬಡಾವಣೆಗಳಿಗೆ ನಿರಂತರ ಕುಡಿಯುವ ನೀರು ಪೂರೈಸಲು ₹ 96.50 ಕೋಟಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗಾಜನೂರು ಜಲಾಶಯದಿಂದ ನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗಳಿಗೆ ನೀರು ಸರಬರಾಜು ಮಾಡಲು ₹ 130.70 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಶೇ 55ರಷ್ಟು ಪೂರ್ಣಗೊಂಡಿದೆ. ಶಿವಮೊಗ್ಗ ನಗರದ ಹೊರಭಾಗದ ಕೆಲವು ಪಂಚಾಯತಿ ವ್ಯಾಪ್ತಿಯ ಪ್ರದೇಶಗಳು ಹಾಗೂ ನಿರ್ಮಾಣಗೊಂಡಿರುವ ಹೊಸ ವಸತಿ ಬಡಾವಣೆಗಳಿಗೆ ನೀರು ಪೂರೈಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ ದೊರೆತಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗೌರವ ಸಂಭಾವನೆ ಹೆಚ್ಚಳ: ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಗೌರವ ಸಂಭಾವನೆ ₹ 7 ಸಾವಿರದಿಂದ ₹ 12ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಂಭಾವನೆ ಹೆಚ್ಚಳ ಇದೇ ಜೂನ್‌ನಿಂದ ಜಾರಿಯಾಗಲಿದೆ. ಗ್ರಂಥಾಲಯ ಅವಧಿ ಬೆಳಿಗ್ಗೆ 9ರಿಂದ 11ರವರೆಗೆ, ಮಧ್ಯಾಹ್ನ 4ರಿಂದ 6ವರೆಗೆ ವಿಸ್ತರಿಸಲಾಗಿದೆ. ಈ ಮೊದಲ ಶಿಕ್ಷಣ ಇಲಾಖೆ ಅಧೀನದಲ್ಲಿದ್ದ 5,633 ಗ್ರಾಮೀಣ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದರು.

ADVERTISEMENT

ಜಲ ಜೀವನ್ ಮಿಷನ್‌ಗೆ ₹ 6768.85 ಕೋಟಿ: ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೆ ನೀರು ಒದಗಿಸುವ ‘ಮನೆ ಮನೆಗೆ ಗಂಗೆ’ ಯೋಜನೆಯಲ್ಲಿ 7 ಬೃಹತ್ ಕಾಮಗಾರಿಗಳಿಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ಒಟ್ಟು ಮೊತ್ತ ₹ 6768.85 ಕೋಟಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ಎರಡೂವರೆ ವರ್ಷಗಳಲ್ಲಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

ಮದುವೆ, ಸಮಾರಂಭಗಳೇ ಕೊರೊನಾ ಕೇಂದ್ರಗಳು: ಕೊರೊನಾ ಹರಡುವಿಕೆ ತಡೆಯಲು ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 193 ಕಂಟೈನ್‍ಮೆಂಟ್ ವಲಯಗಳನ್ನು ಸ್ಥಾಪಿಸಲಾಗಿದ್ದು, ಜನರ ಸಂಚಾರ ಸಂಪೂರ್ಣ ನಿರ್ಬಂಧಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಂತ ಹಂತವಾಗಿ ನೀಡಲಾಗುತ್ತಿದೆ. ಮದುವೆ, ಸಭೆ ಸಮಾರಂಭಗಳಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜನರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಇಂತಹ ಸಭೆ ಸಮಾರಂಭಗಳಿಂದ ದೂರವಿರಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.