ADVERTISEMENT

ತೀರ್ಥಹಳ್ಳಿ: ನಿತ್ಯ 400 ಲೀಟರ್‌ ಹಾಲು ಉತ್ಪಾದಿಸುವ ರೈತ

ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ಮಾದರಿಯಾದ ಹೊಸಹಳ್ಳಿ ಸುಧಾಕರ್‌

ನಿರಂಜನ ವಿ.
Published 15 ಫೆಬ್ರುವರಿ 2023, 6:29 IST
Last Updated 15 ಫೆಬ್ರುವರಿ 2023, 6:29 IST
ಜಾನುವಾರುಗಳೊಂದಿಗೆ ರೈತ ಹೊಸಹಳ್ಳಿ ಸುಧಾಕರ್
ಜಾನುವಾರುಗಳೊಂದಿಗೆ ರೈತ ಹೊಸಹಳ್ಳಿ ಸುಧಾಕರ್   

ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಸಮೃದ್ಧವಾದ ಬೆಳೆಗೆ ಬೇಸಾಯ ಅಗತ್ಯ ಎಂಬುದು ತಲೆಮಾರುಗಳ ಕಲ್ಪನೆ. ವಾರ್ಷಿಕವಾಗಿ ಸರಾಸರಿ 250 ಇಂಚಿಗೂ ಹೆಚ್ಚು ಮಳೆ ಬೀಳುವ ಆಗುಂಬೆ ಭಾಗದಲ್ಲಿ ಕೃಷಿ ಬದುಕು ಅಸಾಧ್ಯ. ಈ ಎರಡನ್ನೂ ದಿಟ್ಟವಾಗಿ ಎದುರಿಸಿದ ರೈತ ಹೊಸಹಳ್ಳಿ ಸುಧಾಕರ್‌ ಅವರದ್ದು ನೆಮ್ಮದಿಯ ಕೃಷಿ ಬದುಕು.

ಬಿ.ಕಾಂ ಪದವಿ ಪಡೆದಿರುವ ಅವರು ತಮಗಿರುವ 15 ಎಕರೆ ಜಮೀನಿನಲ್ಲಿ ಪೂರ್ಣ ಕೃಷಿ ಬದುಕು ನಡೆಸುತ್ತಿದ್ದಾರೆ. ಸುಮಾರು 5 ಎಕರೆ ಪ್ರದೇಶವನ್ನು ಹೈನುಗಾರಿಕೆಗಾಗಿ ಮೀಸಲಿರಿಸಿದ್ದಾರೆ. ದಿನಕ್ಕೆ 400 ಲೀಟರ್‌ ಹಾಲು ಸಂಗ್ರಹಿಸಿ ಸ್ವತಃ ಮಾರಾಟ ಮಾಡುತ್ತಿದ್ದಾರೆ.

ಹಾಲನ್ನು ಈ ಹಿಂದೆ ಉಡುಪಿ ಜಿಲ್ಲೆಯ ಹೆಬ್ರಿ ಡೇರಿಗೆ ಪೂರೈಸುತ್ತಿದ್ದರು. ಇದರಿಂದ ಪ್ರತಿ ಲೀಟರ್‌ ಹಾಲಿಗೆ ₹7 ಅಧಿಕ ಲಾಭ ಪಡೆಯುತ್ತಿದ್ದರು. ಈಚೆಗೆ ಸರ್ಕಾರ ಹಾಲಿನ ದರ ಹೆಚ್ಚಿಸಿದ್ದ ಪರಿಣಾಮ ಸ್ಥಳೀಯವಾಗಿ ಬಿದರಗೋಡು ನಂದಿನಿ ಡೇರಿಗೆ ಹಾಲು ಪೂರೈಸುತ್ತಿದ್ದಾರೆ. ಹೆಬ್ರಿಗಿಂತ ₹2 ಕಡಿಮೆ ಲಭಿಸಿದ್ದರೂ ಸಾಗಣೆ ವೆಚ್ಚ ಉಳಿತಾಯದಿಂದಾಗಿ ಲಾಭವಾಗುತ್ತಿದೆ.

ADVERTISEMENT

ಮೂರು ವರ್ಷಗಳ ಹಿಂದೆ 150x80 ಅಡಿ ವಿಸ್ತೀರ್ಣದಲ್ಲಿ ಹೈನುಗಾರಿಕೆ ಆರಂಭಿಸಿದ ಸುಧಾಕರ್‌ ಬಳಿ ಸದ್ಯ 60 ಜಾನುವಾರುಗಳಿವೆ. ಎಚ್‌ಎಫ್‌, ಗೀರ್‌, ಮಲೆನಾಡು ಗಿಡ್ಡ ತಳಿ ಬೆಳೆಸುತ್ತಿದ್ದಾರೆ. ಜಾನುವಾರುಗಳ ಮೇವಿಗಾಗಿ ಕರ್ನಾಟಕದ ವಿವಿಧ ಮೂಲೆಗಳಿಂದ ಬಾರ್ಲಿ, ಜೋಳ, ಹುಲ್ಲುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ದುಂದುವೆಚ್ಚ ತಡೆಯುವ ಉದ್ದೇಶದಿಂದ ತಾವೇ ನೇಪಿಯರ್‌ ಹುಲ್ಲುಗಳನ್ನು ಬೆಳೆಯಲು ಆರಂಭಿಸಿದ್ದು, ‘ಇದರಿಂದ ಹೆಚ್ಚಿನ ಆದಾಯ ನಿರೀಕ್ಷೆ ಇದೆ’ ಎನ್ನುತ್ತಾರೆ ಸುಧಾಕರ್.‌

ಕೊಟ್ಟಿಗೆಯಲ್ಲಿ ಸಂಗ್ರಹವಾಗುವ ಸಗಣಿ, ಗಂಜಲವನ್ನು (ಗೋಮೂತ್ರ) ಬಾವಿಯಲ್ಲಿ ಸಂಗ್ರಹಿಸುವ ವಿಧಾನ ಅನುಸರಿಸುತ್ತಿದ್ದಾರೆ. ಹೊಂಡಕ್ಕೆ ಬೋರ್‌ವೆಲ್‌ ಮೂಲಕ ನೀರು ಹಾಯಿಸಿ ತುಂತುರು ನೀರಾವರಿಗೆ ಅನುಕೂಲ ವಾಗುವಂತೆ ಸ್ಲರಿ ತಯಾರಿ ಮಾಡಿಕೊಳ್ಳುತ್ತಾರೆ. ಇದರಿಂದ ತೋಟದ ಅಡಿಕೆ, ಕಾಫಿ, ಕಾಳುಮೆಣಸು ಇಳುವರಿ ಹೆಚ್ಚಿದೆ. ಬೇಸಾಯದಿಂದ ಮುಕ್ತಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಸಮಾಜಸೇವೆಗೂ ಮುಂದು: ಕೃಷಿ ಬದುಕಿನ ಜೊತೆಗೆ ರಾಜಕೀಯ, ಸಮಾಜಸೇವೆ, ಗುತ್ತಿಗೆದಾರಿಕೆ, ಉದ್ಯಮಿಯಾಗಿಯೂ ಹಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿರುವ ಅವರು ಆಗುಂಬೆಯಲ್ಲಿ ಮುಚ್ಚುವ ಹಂತದಲ್ಲಿದ್ದ ಪ್ರೌಢಶಾಲೆ ಉಳಿಸುವ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದಾರೆ. 5 ವರ್ಷಗಳ ಕಾಲ ಸ್ವತಃ ತಾವೇ ನಾಲ್ವರು ಶಿಕ್ಷಕರನ್ನು ನೇಮಿಸಿ ನೂರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.

ಬಿದರಗೋಡು ಗ್ರಾಮದಲ್ಲಿ ಆಟೊ ನಿಲ್ದಾಣವನ್ನು ಮಾಡಿಸಿದ್ದ ಇವರು ಎರಡು ಬಾರಿ ತಾಲ್ಲೂಕು ಪಂಚಾಯಿತಿ ಸದಸ್ಯ, ಒಂದು ಬಾರಿ ಉಪಾಧ್ಯಕ್ಷ, ಪ್ರಭಾರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.