ಶಿವಮೊಗ್ಗ: ‘ರಕ್ತ ಚೆಲ್ಲಿಯಾದರೂ ಡಿಸಿ ಕಚೇರಿ ಎದುರು ಇರುವ ಆಟದ ಮೈದಾನದ ಜಾಗ ಉಳಿಸಿಕೊಳ್ಳುತ್ತೇವೆ. ಇದಕ್ಕಾಗಿ ನ್ಯಾಯಬದ್ಧ ಹೋರಾಟ ಆರಂಭವಾಗಿದೆ’ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ರಾಷ್ಟ್ರಭಕ್ತರ ಬಳಗದಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಆ ಜಾಗವನ್ನು ಈದ್ಗಾ ಮೈದಾನ ಎಂದು ಯಾರೂ ಕರೆಯಬಾರದು. ಇದು ವಕ್ಫ್ ಮಂಡಳಿಗೆ ಸೇರಿದೆ ಎಂಬುದಕ್ಕೆ ಯಾವ ದಾಖಲೆಗಳೂ ಇಲ್ಲ. ಅದು ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಸೂಡಾ) ಸೇರಿದ ಜಾಗ. ಅಲ್ಲಿ ಆಟದ ಮೈದಾನ ಅಥವಾ ಪಾರ್ಕ್ ನಿರ್ಮಿಸಬಹುದೇ ಹೊರತು ಪ್ರಾರ್ಥನೆ ಮಾಡುವಂತಿಲ್ಲ’ ಎಂದರು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆ.ಎಸ್.ಈಶ್ವರಪ್ಪ, ‘ಸತ್ಯ ಮಾತಾಡಿದ ಕಾರಣಕ್ಕೆ ನನ್ನ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೀರಿ. ಈಗ ಆ ಜಾಗದಲ್ಲಿ ಬೇಲಿ ಹಾಕಲು ಬಿಟ್ಟಿದ್ದೀರಿ. ನೀವು ಐಪಿಎಸ್ ಓದಿರಬಹುದು. ಕಾಂಗ್ರೆಸ್ ಪಕ್ಷದ ಹಿಂಬಾಲಕರ ರೀತಿ ವರ್ತಿಸಬೇಡಿ. ನ್ಯಾಯದ ಪರ ಮಾತಾಡಿ. ನಾವು ದನ ಕಾಯಲು ಬಂದಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಆಗಲಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ರಾಷ್ಟ್ರಭಕ್ತ ಬಳಗದ ಪ್ರಮುಖ ಕೆ.ಇ. ಕಾಂತೇಶ್ ಹಾಗೂ ಶ್ರೀಕಾಂತ್ ಮಾತನಾಡಿ, ಡಿಸಿ, ಎಸ್ಪಿ, ಮಹಾನಗರ ಪಾಲಿಕೆ ಅಯುಕ್ತರು ಜವಾಬ್ದಾರಿಯಿಂದ ವರ್ತಿಸಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮಹಾನಗರ ಪಾಲಿಕೆಗೆ ಸೇರಬೇಕಾದ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.