ADVERTISEMENT

ಗೃಹ ಸಚಿವರ ಸ್ವಕ್ಷೇತ್ರದಲ್ಲಿ ಶೇ 60ರಷ್ಟು ಕಿಕ್‌ಬ್ಯಾಕ್: ಕಿಮ್ಮನೆ ರತ್ನಾಕರ

ಪತ್ರಿಕೆಗಳ ಬೌದ್ಧಿಕ ಮಟ್ಟದಿಂದ ಕೋಮು ಸಂಘರ್ಷಕ್ಕೆ ತಡೆ: ಕಿಮ್ಮನೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 5:24 IST
Last Updated 20 ಏಪ್ರಿಲ್ 2022, 5:24 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ತೀರ್ಥಹಳ್ಳಿ: ‘ರಾಜ್ಯದಲ್ಲಿ ಕೋಮು ಸಂಘರ್ಷ ಮುಂಚೂಣಿಗೆ ಬರಲು ನೇರವಾಗಿ ಗೃಹ ಸಚಿವರು ಕಾರಣ. ಸೌಹಾರ್ದ ಹಾಳು ಮಾಡಿದವರ ಪೈಕಿ ಪ್ರಥಮ ಆರೋಪಿ ಆರಗ ಜ್ಞಾನೇಂದ್ರ ಅವರ ಮೇಲೆ ಕೇಸು ದಾಖಲು ಮಾಡಬೇಕು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಒತ್ತಾಯಿಸಿದರು.

‘ಕರ್ನಾಟಕದ 7 ಕೋಟಿ ಜನರಿಗೆ ಗೃಹಸಚಿವ ಎಂಬುದನ್ನು ಮರೆತು, ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿಗೆ ಆರಗ ಸೀಮಿತವಾಗಿ ಯೋಚನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕೆಡದಂತೆ ಸಮತೋಲನದ ಸುದ್ದಿಗಳನ್ನು ಪತ್ರಿಕೆಗಳು ಬಿತ್ತರಿಸುತ್ತಿದ್ದು, ದೊಂಬಿ ತಣ್ಣಗಾಗುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮುದ್ರಣ ಮಾಧ್ಯಮವನ್ನು ಪ್ರಶಂಸಿಸಿದರು.

‘ಕ್ಷೇತ್ರದಲ್ಲಿ ಸೋಲಾರ್‌ ಅಳವಡಿಕೆ ಕಾಮಗಾರಿಯಲ್ಲಿ ಶೇ 60ರಷ್ಟು ಲಂಚ ಪಡೆಯಲಾಗಿದೆ. ರಾಜ್ಯ ಟೆಂಡರ್‌ ದುರುಪಯೋಗ ಆಗುತ್ತಿದೆ. ನಂದಿತಾ ಪ್ರಕರಣ ಮತ್ತು ಗೃಹ ಇಲಾಖೆಯ ಅಕ್ರಮ ನೇಮಕಾತಿ ದಂಧೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಆರೋಪ ಹೊತ್ತವರು ತನಿಖೆ ನಡೆಸುವುದು ನ್ಯಾಯೋಚಿತವಲ್ಲ. ಸಚಿವರ ಬೆಂಬಲಿಗರು ಆರೋಪಗಳಲ್ಲಿ ಭಾಗಿಯಾಗಿದ್ದಾರೆ. ವಿರೋಧ ಪಕ್ಷಗಳು ನೀಡುವ ದೂರಿಗೆ ಠಾಣೆಯಲ್ಲಿ ಬೆಲೆ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ಗುತ್ತಿಗೆದಾರರ ಮೇಲೆ ಅನವಶ್ಯಕ ಹೊರೆ: ‘ಆಡಳಿತ ವಿಕೇಂದ್ರಿಕರಣ ವ್ಯವಸ್ಥೆಯನ್ನು ಹಾಳುಗೆಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ನಿರ್ಣಯಗಳಿಗೆ ಬೆಲೆ ಇಲ್ಲದಂತಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗದೆ ಜನ ಸಾಮಾನ್ಯರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ನೇರವಾಗಿ ಕೇಂದ್ರ, ರಾಜ್ಯ ಸರ್ಕಾರ ಟೆಂಡರ್‌ ಕರೆಯುವುದರಿಂದ ಗ್ರಾಮ ಪಂಚಾಯಿತಿಯ ಸ್ಥಳೀಯ ಕೆಲಸಗಳಿಗೆ ಹಣ ಇಲ್ಲ. ಬಿಜೆಪಿಯ ಕೇಂದ್ರೀಕೃತ ವ್ಯವಸ್ಥೆಯ ಇನ್ನೊಂದು ರೂಪ ಇದು. ಗುತ್ತಿಗೆದಾರರ ಮೇಲೆ ಸರ್ಕಾರ ಅನವಶ್ಯಕ ಕಮಿಷನ್‌ ಹೊರೆ ಹಾಕಿದೆ’ ಎಂದು ಕಿಮ್ಮನೆ ದೂರಿದರು.

ಜಲಜೀವನ್‌ ಮಿಷನ್‌ ಯೋಜನೆ ಯಡಿ ಜನಸಾಮಾನ್ಯರ ಪ್ರಧಾನಿ ನರೇಂದ್ರ ಮೋದಿ ಪೈಪ್‌ಲೈನ್‌ ಇಲ್ಲದ ಕೇವಲ ನಲ್ಲಿಕಟ್ಟೆ ಮಾತ್ರ ನೀಡಿದ್ದಾರೆ. ಮೇಲ್ನೋಟಕ್ಕೆ ಹೊಳೆಯುವ ಯೋಜನೆಗಳನ್ನು ಮಾತ್ರ ಕೇಂದ್ರ ಸರ್ಕಾರ ನೀಡಿ ಗೂಬೆ ಕೂರಿಸುತ್ತಿದೆ. ತುಂಗಾ ನದಿಯ ಕುಡಿಯುವ ನೀರಿನ ಯೋಜನೆಯಲ್ಲಿ ಸಚಿವರ ಪಾಲು ಎಷ್ಟು ಎಂದು ಪ್ರಶ್ನಿಸಿದರು.

ಅನುಭವ ಹೊಂದಿರುವ ಈಶ್ವರಪ್ಪ 3ನೇ ತರಗತಿ ಮಕ್ಕಳ ಹಾಗೆ ಹೇಳಿಕೆ ನೀಡುತ್ತಾರೆ. ಗೃಹ ಇಲಾಖೆಯ ಅಕ್ರಮವನ್ನು ಖಂಡಿಸಿ ಸದ್ಯದಲ್ಲೇ ಗುಡ್ಡೇಕೊಪ್ಪದಿಂದ ಹೊದಲ, ಕುಡುಮಲ್ಲಿಗೆ ಮಾರ್ಗವಾಗಿ ಪಾದಯಾತ್ರೆ ನಡೆಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶಬನಮ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ,‌ ಕಾಂಗ್ರೆಸ್‌ ವಕ್ತಾರ ವಿಶ್ವನಾಥ ಶೆಟ್ಟಿ, ಮುಖಂಡರಾದ ಡಿ. ಲಕ್ಷ್ಮಣ್‌, ಪಟಮಕ್ಕಿ ಮಹಾಬಲೇಶ್‌, ಖಾಸಿಂ ಸಾಬ್‌, ಮಂಜುನಾಥ್‌, ವಿಲಿಯಂ ಮಾರ್ಟಿಸ್ ಇದ್ದರು.

‘ಗೃಹಸಚಿವರೇ ಸ್ವಲ್ಪ ಓದಿ’

‘ತೀರ್ಥಹಳ್ಳಿಯ ಘನತೆಯನ್ನು ಪ್ರತಿನಿಧಿಸುವ ಗೃಹ ಸಚಿವ ಆರಗ ಜ್ಞಾನೇಂದ್ರ ಯಡವಟ್ಟು ಹೇಳಿಕೆ ನೀಡುವುದು ಸಮಂಜಸವಲ್ಲ. ಕೋಮು ಸೌಹಾರ್ದ ಕಾಪಾಡುವ ಸಚಿವರು ಭಿನ್ನ ಹೇಳಿಕೆ ನೀಡಬಾರದು. ಬಿಜೆಪಿ ಜನ ಸಾಮಾನ್ಯರ ಕಾರ್ಯಕ್ರಮ ರೂಪಿಸಲಿ. ಹೇಳಿಕೆ ನೀಡುವ ಮೊದಲು ಸ್ವಲ್ಪ ಓದಿಕೊಂಡು ಹೋಗಿ. ನಿಮ್ಮ ಹೇಳಿಕೆ ಹೇಸಿಗೆ ತರಿಸುವಂತಿದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.