ಶಿವಮೊಗ್ಗ: ‘ಹಾಲು ನಂದಿನಿ ಬೂತ್‌ನ ಪ್ಯಾಕೆಟ್‌ನಲ್ಲಿ ಬರುತ್ತದೆ. ಅಕ್ಕಿ, ರಾಗಿ, ಜೋಳ ಸೂಪರ್ ಮಾರ್ಕೆಟ್‌ನಿಂದ ಬರುತ್ತವೆ’ ಎಂಬ ಮಕ್ಕಳಲ್ಲಿನ ಕಲ್ಪನೆ ದೂರ ಮಾಡಲು ಇನ್ನು ‘ಕೃಷಿ ಯಾನ’ ಹೆಸರಿನ ಪರಿಸರ ಪ್ರವಾಸ ಆರಂಭವಾಗಿದೆ.
ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರನ್ನು ದನದ ಕೊಟ್ಟಿಗೆ ಹಾಗೂ ಭತ್ತದ ಗದ್ದೆಗೆ ಕರೆದೊಯ್ದು ಹಾಲು, ಅನ್ನ ರೂಪುಗೊಳ್ಳುವ ಪ್ರಕ್ರಿಯೆ ಬಗ್ಗೆ ಪಾಠ ಹೇಳಿಕೊಡಲು ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹೊಸದಾಗಿ ‘ಕೃಷಿ ಪ್ರವಾಸೋದ್ಯಮ’ ಆರಂಭಿಸಿದೆ.
ಅದಕ್ಕಾಗಿ ನವುಲೆಯ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಎಂಟು ಎಕರೆ ಜಾಗದಲ್ಲಿ ಅಭಿವೃದ್ಧಿಪಡಿಸಿರುವ ‘ಕೃಷಿ ಯಾನ’ ತಾಣಕ್ಕೆ ಕುಲಪತಿ ಪ್ರೊ. ಆರ್.ಸಿ.ಜಗದೀಶ್ ಗುರುವಾರ ಚಾಲನೆ ನೀಡಿದರು.
ಗ್ರಾಮೀಣ ಜನಜೀವನ, ಕೃಷಿ ಚಟುವಟಿಕೆ, ಹಾರ ಉತ್ಪಾದನೆ, ಸಂಸ್ಕರಣೆ ಬಗೆಗಿನ ಆಸಕ್ತಿಗೆ ನೀರೆರೆಯುವ ಈ ತಾಣದಲ್ಲಿ ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳ ಕೃಷಿ, ಮೇವು ಉತ್ಪಾದನೆ, ಹೈನುಗಾರಿಕೆ, ಕುರಿ, ಕೋಳಿ, ಆಡು, ಮೀನು, ಜೇನು ಸಾಕಾಣಿಕೆಯ ಜೊತೆಗೆ ತೋಟಗಾರಿಕೆಯ ಭಾಗವಾಗಿ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಒಟ್ಟಾರೆ ಕೃಷಿ, ತೋಟಗಾರಿಕೆ ಹಾಗೂ ಅದರ ಉಪಕಸುಬುಗಳ ಬಗೆಗಿನ ಸಮಗ್ರ ಅಂಶಗಳ ಬಗ್ಗೆಯೂ ನೋಡುಗರಿಗೆ ಇಲ್ಲಿ ಮಾಹಿತಿ ಹಾಗೂ ಮಾರ್ಗದರ್ಶನ ಲಭ್ಯವಿದೆ.
ಹಿಂದೊಮ್ಮೆ ಚಿಕ್ಕ ಮಕ್ಕಳು ಆಡುತ್ತಿದ್ದ ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ ಆಟದ ಗಮ್ಮತ್ತನ್ನು ಕೃಷಿ ಪ್ರವಾಸದಲ್ಲಿ ಅನುಭವಿಸಬಹುದು. ಹಗ್ಗದ ಮೇಲಿನ ನಡಿಗೆ ಸೇರಿದಂತೆ ಬೇರೆ ಬೇರೆ ಸಾಹಸ ಕ್ರೀಡೆಗಳಿಗೂ ಇಲ್ಲಿ ಅವಕಾಶವಿದೆ.
‘ಪ್ರಕೃತಿ ಜೊತೆ ನಿಮ್ಮ ಪಯಣ’ ಟ್ಯಾಗ್‌ಲೈನ್‌ನ ಈ ಕೃಷಿಯಾನದಲ್ಲಿ ಕೃಷಿ ಪರಿಚಯ, ಪ್ರಾಯೋಗಿಕ ಕೃಷಿ ಚಟುವಟಿಕೆ, ಸಾಂಪ್ರದಾಯಿಕ ಒಳಾವರಣ ಆಟಗಳು, ಪ್ರಕೃತಿ ಆಧಾರಿತ ಸಾಂಪ್ರದಾಯಿಕ ಆಟಗಳು ಹಾಗೂ ಸ್ಥಳೀಯ ಆಹಾರಗಳ ಆಕರ್ಷಣೆ ಇರಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಪ್ರೊ.ಆರ್.ನಾಗರಾಜ್ ಹೇಳುತ್ತಾರೆ.
ನಗರ ಪ್ರದೇಶದ ಹೊಸ ಪೀಳಿಗೆಗೆ ಕೃಷಿ ಗ್ರಾಮೀಣ ಸೊಗಡನ್ನು ಪರಿಚಯಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಕೆವಿಕೆಯಿಂದ ಸುಸಜ್ಜಿತ ಪ್ರವಾಸಿ ಕೇಂದ್ರ ಆರಂಭಿಸಿದ್ದೇವೆ. ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಬಳಕೆ ಮಾಡಿಕೊಳ್ಳಬಹುದುಪ್ರೊ.ಆರ್.ಸಿ.ಜಗದೀಶ್ ಕುಲಪತಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.