
ಶಿವಮೊಗ್ಗ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿವೆ. ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಂಡು ಎಕರೆಗೆ ₹1ರಂತೆ ಅದಾನಿಯಂತಹ ಕಾರ್ಪೋರೇಟ್ ಕಂಪನಿಗೆ ಕೇಂದ್ರ ಸರ್ಕಾರ ಕೊಟ್ಟಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದೀಗ ವಿದ್ಯುತ್ ಕ್ಷೇತ್ರದ ಖಾಸಗೀಕರಣದ ತೂಗುಗತ್ತಿಯನ್ನು ಕೂಡ ನಮ್ಮ ತಲೆಯ ಮೇಲೆ ಇಡಲು ಸರ್ಕಾರಗಳು ಹೊರಟಿವೆ. ಅದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ರಾಜ್ಯ ಸಮಿತಿಯ ಸಭೆ ಕರೆದು ಚರ್ಚಿಸಿ ನಂತರ ಹೋರಾಟದ ಮುಂದಿನ ನಿರ್ಧಾರ ತಿಳಿಸಲಾಗುವುದು’ ಎಂದರು.
‘ಕೇಂದ್ರ ಸರ್ಕಾರ ಭತ್ತಕ್ಕೆ ₹6,000 ಮತ್ತು ಜೋಳಕ್ಕೆ ₹5,100 ಬೆಂಬಲ ಬೆಲೆ ನಿಗದಿಪಡಿಸಬೇಕು. ಭೂಸಾಗುವಳಿ ಹಕ್ಕುಪತ್ರ ಕೊಟ್ಟ ಖಾತೆದಾರರಿಗೆ ನೋಟಿಸ್ ನೀಡದೇ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು. ಐಪಿ ಸೆಟ್ ಹೊಂದಿದ ರೈತರಿಗೆ 10 ಗಂಟೆಗೆ ನಿರಂತರ ವಿದ್ಯುತ್ ಕೊಡಬೇಕು. ರೈತರ ಸ್ವಯಂವೆಚ್ಚ ಯೋಜನೆಯನ್ನು ಕೈಬಿಡಬೇಕು. ಅಕ್ರಮ-ಸಕ್ರಮ ಯೋಜನೆಯಡಿ ಹಣ ಕಟ್ಟಿರುವ ರೈತರಿಗೆ ವಿದ್ಯುತ್ ಒದಗಿಸಬೇಕು’ ಎಂದು ಆಗ್ರಹಿಸಿದರು.
ಪ್ರಮುಖರಾದ ಕೆ.ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಹಿಟ್ಟೂರುರಾಜು, ಇ.ಬಿ. ಜಗದೀಶ್, ಸಿ.ಬಿ.ಹನುಮಂತಪ್ಪ, ಸಿ.ಚಂದ್ರಪ್ಪ, ಎಂ. ಮಹಾದೇವಪ್ಪ, ಮಂಜಪ್ಪ ಮತ್ತಿತರರಿದ್ದರು.
ಎನ್.ಡಿ. ಸುಂದರೇಶ್ ನೆನಪಿನ ಸಭೆ
ಡಿ.21ಕ್ಕೆ ರೈತ ಸಂಘದ ಸಂಸ್ಥಾಪಕ ಎನ್.ಡಿ. ಸುಂದರೇಶ್ ಅವರ ನೆನಪಿನ ಸಭೆ ಡಿ.21ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಆರ್‌ಟಿಒ ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ನಡೆಯಲಿದೆ ಎಂದು ಎಚ್.ಆರ್. ಬಸವರಾಜಪ್ಪ ಹೇಳಿದರು. ಎನ್.ಡಿ. ಸುಂದರೇಶ್ ಅವರ 33ನೇ ನೆನಪಿನ ಸಭೆ ಇದಾಗಿದ್ದು ಅವರ ನೆನಪಿನಲ್ಲಿ ಅವರು ಹಾಕಿಕೊಟ್ಟ ಶಿಸ್ತು ಪ್ರಾಮಾಣಿಕತೆ ಮತ್ತು ವೈಚಾರಿಕ ವಿಚಾರಗಳ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸಲು ಪಣ ತೊಡಲಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.