
ಶಿವಮೊಗ್ಗ: ‘ಕೃಷಿಯಲ್ಲಿ ಆಧುನಿಕ ತಂತ್ರಗಾರಿಕೆ ಅಳವಡಿಕೆಯಲ್ಲಿ ಹಾಗೂ ಕೃಷಿ ಸಂಬಂಧಿತ ಇಲಾಖೆ ಹಾಗೂ ಸಂಸ್ಥೆಗಳ ಸಂಶೋಧಕರ ಮಾರ್ಗದರ್ಶನ ಪಡೆಯುವಲ್ಲಿ ರೈತರು ಹಿಂದುಳಿಯುತ್ತಿದ್ದಾರೆ. ಅದು ಬದಲಾಗಬೇಕು; ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ರೈತರು ಹಿಂದುಳಿಯಲು ಸಾಧ್ಯವೇ ಇಲ್ಲ’ ಎಂದು ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕೆ ಮೇಳದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ದೇಶದ ಬೆಳವಣಿಗೆಯಲ್ಲಿ ರೈತರು ಮತ್ತು ಸೈನಿಕರದ್ದು ದೊಡ್ಡ ಪಾತ್ರವಿದೆ. ಹೀಗಾಗಿ ಕೃಷಿಯಲ್ಲಿ ರೈತರು ಹಳೆಯ ಪದ್ಧತಿಯನ್ನೇ ಮುಂದುವರಿಸುವ ಬದಲು ವಿಜ್ಞಾನಿಗಳ ಸಂಶೋಧನೆಗಳನ್ನು ಅಳವಡಿಸಿಕೊಂಡರೆ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದರು.
‘ತಾಯಿಯಂಹತ ಭೂಮಿ ಎಂದಿಗೂ ಅನ್ನದಾತರಿಗೆ ದ್ರೋಹ ಬಗೆಯುವುದಿಲ್ಲ. ಆದರೆ ಅತಿಯಾಸೆಯಿಂದ ಅನ್ನ ನೀಡುವ ಭೂಮಿಯನ್ನೇ ಮಲಿನ ಮಾಡುತ್ತಿದ್ದೇವೆ. ಅಭಿವೃದ್ಧಿ ಹೆಸರಲ್ಲಿ ಕೃಷಿಯಲ್ಲಿ ರಸಗೊಬ್ಬರ ಬಳಕೆ ಹೆಚ್ಚಳವಾಗುತ್ತಿದೆ. ಇದರಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುವ ಜೊತೆಗೆ ಬೆಳೆಗಳ ಇಳುವರಿಯೂ ಕುಂಠಿತಗೊಳ್ಳುತ್ತಿದೆ. ಇದನ್ನು ರೈತರು ಮನಗಾಣಬೇಕಿದೆ’ ಎಂದು ಸಲಹೆ ನೀಡಿದರು.
‘ಕೃಷಿಯನ್ನು ಉಳಿಸುವ ಕೆಲಸವನ್ನು ಸಂಶೋಧನಾ ವಿದ್ಯಾರ್ಥಿಗಳು ಮಾಡಬೇಕಿದೆ. ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ ಸೇರಿ ಬೆಳೆಗಳ ಹಾನಿಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ದೂರ ಮಾಡಲು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ವೈ.ಎಚ್.ನಾಗರಾಜ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಕೆ.ಸಿ. ಶಶಿಧರ, ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರಿಣಿಕುಮಾರ್, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ನಿರ್ದೇಶಕ ಬಿ.ಕೆ.ಕುಮಾರಸ್ವಾಮಿ, ಜೆ.ಜಿ.ಕಾವೇರಿಯಪ್ಪ, ಎಚ್.ಡಿ.ದೇವಿಕುಮಾರ್, ಎಚ್.ಎಸ್.ಶಶಾಂಕ್, ಕೃಷಿ ಮತ್ತು ತೋಟಗಾರಿಕೆ ಮೇಳದ ಅಧ್ಯಕ್ಷ ಜಿ.ಕೆ.ಗಿರಿಜೇಶ್, ಉಪಾಧ್ಯಕ್ಷ ಬಿ.ಎಂ.ದುಷ್ಯಂತ್‌ಕುಮಾರ್ ಉಪಸ್ಥಿತರಿದ್ದರು.
ಕೃಷಿಕರ ಬೆಂಬಲಕ್ಕೆ ಮನಮೋಹನ್ ಸಿಂಗ್ ಕೆಲಸ ಸ್ಮರಣೆ
‘ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ದೇಶದಲ್ಲಿ ಆಹಾರ ಸುರಕ್ಷತಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರ ಬೆನ್ನಿಗೆ ನಿಂತಿದ್ದರು. ಕೇಂದ್ರದಿಂದ ರೈತರ ₹72000 ಕೋಟಿ ಸಾಲಮನ್ನಾ ಬೆಳೆಗಳಿಗೆ ಬೆಂಬಲ ಬೆಲೆ ರಸಗೊಬ್ಬರ ನೀರಾವರಿ ವ್ಯವಸ್ಥೆಗಳ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸಿದ್ದರು’ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸ್ಮರಿಸಿದರು. ‘ರೈತ ಯಾವುದೇ ಬೆಳೆ ಬೆಳೆಯದಿದ್ದರೆ ಭವಿಷ್ಯದಲ್ಲಿ ದೇಶಕ್ಕೆ ಗಂಡಾಂತರ ಎದುರಾಗಲಿದೆ. ಹೀಗಾಗಿ ಮೊದಲು ಅನ್ನದಾತರ ಬಲವರ್ಧನೆ ಮಾಡಬೇಕಿದೆ. ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಸರ್ಕಾರ ಆ ಕೆಲಸ ಮಾಡಬೇಕಿದೆ. ರೈತರ ಪರವಾಗಿ ಸರ್ಕಾರಗಳು ನಿಲ್ಲದಿದ್ದರೆ ದೇಶ ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಮಗ್ರ ಸಾವಯವ ಕೃಷಿ ಅಳವಡಿಕೆಗೆ ಸಲಹೆ
‘ಸಮಗ್ರ ಕೃಷಿ ಮತ್ತು ಸಾವಯುವ ಕೃಷಿ ಪದ್ಧತಿಯನ್ನು ಇಂದು ಪ್ರತಿಯೊಬ್ಬ ರೈತರೂ ಅಳವಡಿಸಿಕೊಳ್ಳಬೇಕಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಸಲಹೆ ನೀಡಿದರು. ‘ಆಧುನಿಕತೆಯ ಭರಾಟೆಯಲ್ಲಿ ರೈತರು ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಯ ಅಗತ್ಯತೆ ಇದೆ. ರೈತನೇ ಒಬ್ಬ ವಿಜ್ಞಾನಿ ಇದ್ದಂತೆ. ಪುರಾತನ ಕಾಲದಿಂದಲೂ ಯಾವುದೇ ತಂತ್ರಜ್ಞಾನಗಳಿಲ್ಲದೆ ವಿಜ್ಞಾನಿಗಳ ಸಲಹೆಗಳಿಲ್ಲದೆ ರೈತರು ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೆ. ತಂತ್ರಜ್ಞಾನ ವಂಶಪಾರಂಪರ್ಯವಾಗಿ ನಮ್ಮ ಪೀಳಿಗೆಗೆ ಬಂದಿದೆ. ಆದರೆ ಇಂದು ಹೊಸ ತಳಿಗಳು ಬಂದ ಮೇಲೆ ಕೃಷಿ ಪದ್ಧತಿಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಏಕ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಮಿಶ್ರ ಅಥವಾ ಸಮಗ್ರ ಬೆಳೆಯತ್ತ ಚಿಂತನೆ ಮಾಡಬೇಕಿದೆ’ ಎಂದರು. ‘ರೈತರು ಇಂದು ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಪ್ರಪಂಚವೇ ಒಂದು ಮಾರುಕಟ್ಟೆಯಾಗಿದ್ದು ಬೇರೆ ಬೇರೆ ದೇಶಗಳ ಬೆಳೆಗಳು ಭಾರತವನ್ನು ಪ್ರವೇಶಿಸುತ್ತಿವೆ. ಅವುಗಳಿಗೆ ಪೈಪೋಟಿಯನ್ನು ನಮ್ಮ ಬೆಳೆಗಳು ಮಾಡಬೇಕಿದೆ. ಅದಕ್ಕಾಗಿ ರೈತರು ಸಜ್ಜಾಗಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.