
ಶಿವಮೊಗ್ಗ: ಅಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯೋಚಿಸಿದ್ದ ಯೋಜನೆಗಳು, ಪ್ರಾತ್ಯಕ್ಷಿಕೆಯ ರೂಪ ಪಡೆದಿತ್ತು. ಶಿಕ್ಷಣ, ಆರೋಗ್ಯ, ಅಂತರ್ಜಾಲ ಸುರಕ್ಷತೆ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ನೆರವಾಗುವಂತಹ ಯೋಜನೆಗಳು, ಅಪ್ಲಿಕೇಶನ್ ರೂಪ ಪಡೆದು ತನ್ನತ್ತ ಸೆಳೆದಿತ್ತು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತಾಂತ್ರಿಕ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮವು ಈ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.
ಕೃತಕ ಬುದ್ದಿಮತ್ತೆಯ ಮೂಲಕ (Silent Speech Recognition – SSR) ಧ್ವನಿಯ ಅವಲಂಬನೆ ಇಲ್ಲದೆ, ಕೇವಲ ತುಟಿಗಳ ಚಲನೆಯಿಂದ ಮಾತಿನ ಅರ್ಥವನ್ನು ಗ್ರಹಿಸುವಂತಹ ಅಪ್ಲಿಕೇಶನ್ ಒಂದನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಈ ತಂತ್ರಜ್ಞಾನವು ಮಾತನಾಡಲು ಸಾಧ್ಯವಾಗದವರಿಗೆ ಅಥವಾ ಗದ್ದಲಯುಕ್ತ ಪರಿಸರಗಳಲ್ಲಿ ರಹಸ್ಯ ಸಂವಹನ ನಡೆಸುವಂತಹ, ಮಾನವ–ಕಂಪ್ಯೂಟರ್ ಸಂಪರ್ಕಕ್ಕೆ ಪರಿಣಾಮಕಾರಿ ವೇದಿಕೆಯಾಗಿದೆ.
ಇದರ ಜೊತೆಯಲ್ಲಿ ಮೆಷಿನ್ ಲರ್ನಿಂಗ್ ಸಹಾಯದಿಂದ ಸುಮಾರು 17 ಕಾಯಿಲೆಗಳ ಕುರಿತಾಗಿ, ರೋಗ ಲಕ್ಷಣಗಳ ಆಧಾರದ ಮೇಲೆ ಸ್ವಯಂ ಆರೋಗ್ಯ ಶಿಫಾರಸ್ಸು ನೀಡಬಲ್ಲ ಅಪ್ಲಿಕೇಶನ್, ಎಂಎಲ್ ಮೂಲಕ ಅಪಾರ ಸಂಖ್ಯೆಯ ಉತ್ಪನ್ನಗಳ ವಿಮರ್ಶೆಗಳನ್ನು ವಿಶ್ಲೇಷಿಸಿ ಇ-ಕಾಮರ್ಸ್ ಗ್ರಾಹಕರಿಗೆ ಸೂಕ್ತ ಆಯ್ಕೆ ನೀಡುವಂತಹ ವಿನ್ಯಾಸ ಹೊಂದಿದ ಯೋಜನೆ. ಆನ್‌ಲೈನ್ ಹಣಕಾಸು ವಹಿವಾಟುಗಳು ಸೈಬರ್ ದಾಳಿಗೆ ಗುರಿಯಾಗದಂತೆ ಹಾಗೂ ಅಗತ್ಯ ಗೋಪ್ಯತೆಗಾಗಿ ಎಇಎಸ್ ಎನ್‌ಕ್ರಿಪ್ಶನ್ ಬಳಸಿ, ವಂಚನೆ ಪತ್ತೆಗಾಗಿ ಗಣಕಯಂತ್ರದ ಕ್ರಮಾವಳಿ ಬಳಸಿ ಸಂಯೋಜಿಸುವ ಸುಧಾರಿತ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ಕ್ಯಾಮೆರಾ ಮತ್ತು ಆಳವಾದ ಕಲಿಕಾ ಕ್ರಮಾವಳಿ ಬಳಸಿಕೊಂಡು ಸಂಕೇತ ಭಾಷೆಯನ್ನು, ಸ್ವಯಂಚಾಲಿತವಾಗಿ ಪತ್ತೆ ಹಚ್ಚಿ ವ್ಯಾಖ್ಯಾನಿಸಿ ಅಕ್ಷರದ ರೂಪದಲ್ಲಿ ತಿಳಿಸುವ ಯೋಜನೆ. ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉತ್ಪನ್ನಗಳ ನೈಜತೆ ಕುರಿತಾಗಿ ಮಾರ್ಗದರ್ಶನ ನೀಡುವ ವ್ಯವಸ್ಥೆ, ಹೊಂದಾಣಿಕೆಯುಕ್ತ ಸ್ಟೆಗನೋಗ್ರಫಿ ತಂತ್ರಜ್ಞಾನ, ಸ್ಮಾರ್ಟ್ ಐಒಟಿ-ಆಧಾರಿತ ಕೋಲ್ಡ್ ಸ್ಟೋರೇಜ್ ಮಾನಿಟರಿಂಗ್ ವ್ಯವಸ್ಥೆ, ಸೈಬರ್ ತಂತ್ರಜ್ಞಾನ ಬಳಸಿ ಸಾಮಾಜಿಕ ಮಾಧ್ಯಮದಲ್ಲಿನ ನಕಲಿ ಖಾತೆಗಳನ್ನು ಪತ್ತೆ ಹಚ್ಚುವಂತಹ ಯೋಜನೆಗಳು ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ನಿರೂಪಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಉದ್ಘಾಟಿಸಿದರು. ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.