
ಶಿಕಾರಿಪುರ: ‘ವಸತಿ ಶಾಲೆಗಳ ಆಡಳಿತದಲ್ಲಿ ಗಣಕಯಂತ್ರ ಬಳಕೆ ಆಗುತ್ತಿದೆ. ಅದರೊಂದಿಗೆ ಎಐ ತಂತ್ರಜ್ಞಾನ ಅಳವಡಿಸಿದರೆ ಆಡಳಿತ ಸುಧಾರಣೆಗೆ ರಹದಾರಿಯಾಗುತ್ತದೆ. ಅದು ವಿದ್ಯಾರ್ಥಿಗಳ ಭವಿಷ್ಯಕ್ಕೂ ಉತ್ತಮ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ ಹೇಳಿದರು.
ತಾಲ್ಲೂಕಿನ ಚುರ್ಚಿಗುಂಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲೆಯ ಎಲ್ಲ ವಸತಿ ಶಾಲೆಗಳ ಪ್ರಾಂಶುಪಾಲರ ಸಭೆ, ಎಐ ತಂತ್ರಜ್ಞಾನ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಆಡಳಿತಕ್ಕಾಗಿ ಹಲವು ದಾಖಲೆಗಳನ್ನು ಸಿದ್ಧಪಡಿಸುವುದು ಹೆಚ್ಚು ಒತ್ತಡ, ಸಮಯ ತೆಗೆದುಕೊಳ್ಳುತ್ತದೆ. ಅದನ್ನು ಸರಳೀಕರಿಸುವುದಕ್ಕೆ ಪ್ರತಿವರ್ಷ ಯಾವ ಬಗೆಯ ದಾಖಲೆ ಸಿದ್ಧಪಡಿಸಲಾಗುತ್ತದೆ? ಅದು ಇಲಾಖೆಯ ಯಾವೆಲ್ಲಾ ಕಚೇರಿಗೆ ಅಗತ್ಯ ಎನ್ನುವುದನ್ನು ಮನಗಂಡು ಅದಕ್ಕಾಗಿಯೇ ವಿಶೇಷ ಡ್ಯಾಶ್‌ಬೋರ್ಡ್ ಸಿದ್ಧಪಡಿಸಲಾಗುವುದು’ ಎಂದರು.
‘ವಸತಿ ಶಾಲೆ ನಿರ್ವಹಣೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಎಐ ತರಬೇತಿ ಪೂರಕವಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಹೇಳಿದರು.
ಆಡಳಿತಾತ್ಮಕವಾಗಿ ಎಐ ಬಳಕೆ ಹೇಗೆ ಮಾಡಬಹುದು ಎನ್ನುವ ಕುರಿತು ಡಿ.ಎ.ನಿಂಗಪ್ಪ ತರಬೇತಿ ನೀಡಿದರು.
ದೆಹಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಅಟಲ್ ಟಿಂಕರಿಂಗ್ ಕೇಂದ್ರದಲ್ಲಿ ತಯಾರಿಸಿದ ರೋಬೋ ಬಳಸಿ ಅತಿಥಿಗಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಸಮನ್ವಯಾಧಿಕಾರಿ ಚಂದ್ರಪ್ಪ, ಬಿ.ಉಮೇಶ್, ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ರಾಜು ಮಾತನಾಡಿದರು. ಪ್ರಾಂಶುಪಾಲೆ ಬಿ.ಎಸ್.ಸುಮಾ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.