ಶಿರಾಳಕೊಪ್ಪ (ಶಿಕಾರಿಪುರ): ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ಜನ್ಮಸ್ಥಳ ಹಾಗೂ ಅವರ ತಂದೆ– ತಾಯಿ ಐಕ್ಯಸ್ಥಳದ ಅಭಿವೃದ್ಧಿಗೆ ಚಾಲನೆ ನೀಡುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಸಮೀಪದ ಬಳ್ಳಿಗಾವಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಲ್ಲಮಪ್ರಭು ಜನ್ಮಸ್ಥಳದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘12ನೇ ಶತಮಾನದ ಶರಣರು ಹಾಕಿಕೊಟ್ಟ ಸನ್ಮಾರ್ಗ ವಿಶ್ವದ ಎಲ್ಲರಿಗೂ ಪ್ರೇರಣೆ ಆಗುವಂತದ್ದು. ಅನುಭವ ಮಂಟಪದ ಪೀಠಾಧ್ಯಕ್ಷರಾಗಿದ್ದ ಅಲ್ಲಮಪ್ರಭು ನಾಡಿನ ಶ್ರೇಷ್ಠ ತತ್ವಶಾಸ್ತ್ರಜ್ಞ. ಅಂತಹ ಮಹಾನ್ ಚೇತನ ಹುಟ್ಟಿರುವ ತಾಲ್ಲೂಕಿನಲ್ಲಿ ನಾವು ಇರುವುದೇ ಪುಣ್ಯ. ಅವರು ನಡೆದಾಡಿದ ಕ್ಷೇತ್ರ ಅಭಿವೃದ್ಧಿ ನನ್ನ ಭಾಗ್ಯ’ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಈ ಹಿಂದೆ ಅಲ್ಲಮಪ್ರಭು ಜನ್ಮಸ್ಥಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ, ಪುಷ್ಕರಿಣಿ ಅಭಿವೃದ್ಧಿಗೆ ₹1 ಕೋಟಿ ನೀಡಲಾಗಿತ್ತು. ಕಾಮಗಾರಿ ಆರಂಭಗೊಳ್ಳದ ಕಾರಣಕ್ಕೆ ಅನುದಾನ ವಾಪಸ್ ಹೋಗಿತ್ತು. ಇದೀಗ ಶಾಸಕರು ತಮ್ಮ ಅನುದಾನ ನೀಡಿದ್ದು ಕಾಮಗಾರಿ ಬೇಗ ಪೂರ್ಣಗೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ವಿರಕ್ತಮಠದ ಇಂದೂಧರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭಭಟ್, ಕೆ.ಎಸ್.ಗುರುಮೂರ್ತಿ, ಮುಖಂಡರಾದ ಚನ್ನವೀರಶೆಟ್ರು, ಅಗಡಿ ಅಶೋಕ್, ನಿವೇದಿತಾ ರಾಜು, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ ಶ್ರೀನಿವಾಸಲು, ಸುಧೀರ್, ಮಲ್ಲಪ್ಪ, ನಾಗರಾಜ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.