ಶಿವಮೊಗ್ಗ: ಪ್ರೇಕ್ಷಕರನ್ನೂ ಪಾತ್ರಗಳಾಗಿ ತೊಡಗಿಸಿಕೊಳ್ಳುವ ವಿಶಿಷ್ಟ ಏಕ ವ್ಯಕ್ತಿ ರಂಗ ಪ್ರಯೋಗ ‘ಲೀಕ್ ಔಟ್’ ಡಿ.7ರಂದು ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ ಅಭಿನಯದ ಈ ನಾಟಕ ಶಿವಮೊಗ್ಗದಲ್ಲಿ 100ನೇ ಪ್ರಯೋಗ ಕಾಣುತ್ತಿದೆ.
‘ಲೀಕ್ ಔಟ್’ ಒಟ್ಟು 11 ಕಥೆಗಳನ್ನೊಳಗೊಂಡ ಅಕ್ಷತಾ ಪಾಂಡವಪುರ ಬರೆದ ಪುಸ್ತಕ. ಅದರಲ್ಲಿನ ಆಯ್ದ ಕಥೆಗಳ ಸಾರಾಂಶವನ್ನು ಆಧರಿಸಿ ರಚಿಸಿರುವ ‘ಲೀಕ್ ಔಟ್’ ನಾಟಕದ ಪ್ರದರ್ಶನವನ್ನು ಪಾಂಡವಪುರದ ಚಾನೆಲ್ ಥಿಯೇಟರ್ಸ್ ಸಂಸ್ಥೆ ಹಾಗೂ ಶಿವಮೊಗ್ಗದ ಹವ್ಯಾಸಿ ಕಲಾವಿದರ ಬಳಗ ಸೇರಿ ಆಯೋಜಿಸಿವೆ. ನಾಟಕದ ಮೊದಲ ಪ್ರದರ್ಶನ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದಿದ್ದರೆ, 50ನೇ ಪ್ರದರ್ಶನ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಆಯೋಜನೆಗೊಂಡಿತ್ತು.
ತಮ್ಮ ಈ ಭಿನ್ನ ಪ್ರಯೋಗದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅಕ್ಷತಾ ಪಾಂಡವಪುರ, ಕಲಾವಿದೆಯಾಗಿ ಒಂದಷ್ಟು ವಿಷಯಗಳನ್ನು ರಂಗಭೂಮಿಯಿಂದಲೇ ಹೇಳಬೇಕಿತ್ತು. ಭಾಷಣ, ಸ್ಟ್ಯಾಂಡ್ ಅಪ್ ಕಾಮಿಡಿ, ಹಾಡು, ಮಾತು ಇವೆಲ್ಲವುಗಳಿಂದಲೂ ವಿಷಯ ಹೇಳುವುದು ಬಹಳ ಸುಲಭ. ಆದರೆ, ಅದನ್ನು ರಂಗಭೂಮಿಗೆ ಅಳವಡಿಸಿಕೊಳ್ಳಲು ನಡೆಸಿದ ಹುಡುಕಾಟದಲ್ಲಿ ಕಟ್ಟಿಕೊಂಡದ್ದೇ ಈ ಆಪ್ತ ರಂಗಪ್ರಯೋಗ ಎನ್ನುತ್ತಾರೆ.
‘ಇಂಥ ಪ್ರದರ್ಶನವನ್ನು ಒಮ್ಮೆಲೇ ಸಾವಿರಾರು ಪ್ರೇಕ್ಷಕರೆದುರು ನೀಡಲು ಆಗದು. ಇಲ್ಲಿ ಪ್ರೇಕ್ಷಕರು ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಅದಕ್ಕೆ ಸಹಮತವೂ ಇರುತ್ತದೆ. ಇಲ್ಲದೆಯೂ ಇರುತ್ತದೆ. ವಾದ– ವಿವಾದವೂ ಇರುತ್ತದೆ. ಅವರೂ ಅಳುತ್ತಾರೆ, ನಗುತ್ತಾರೆ, ಹಾಡುತ್ತಾರೆ, ಕುಣಿಯುತ್ತಾರೆ. ಅವರನ್ನು ಇಂತಹದ್ದೊಂದು ರಂಗ ಪ್ರಯೋಗಕ್ಕೆ ಒಳಪಡಿಸಲು ಪಾತ್ರಧಾರಿಯಾಗಿ ನಾನು ಮೊದಲು ಗಟ್ಟಿಯಾಗಬೇಕು. ಹೀಗಾಗಿಯೇ ಇದು ಬೇರೆ ನಾಟಕಗಳಿಗಿಂತ ಭಿನ್ನ. ರಂಗಭೂಮಿಯು ನಿರ್ದೇಶಕರ ಮಾಧ್ಯಮದ ಜೊತೆಗೆ ನಟರ ಮಾಧ್ಯಮವೂ ಹೌದು ಎಂಬುದನ್ನು ಇಲ್ಲಿ ಸಿದ್ಧಪಡಿಸಿದ್ದೇನೆ. ನಟರಿಗೂ ಬೇರೆ ಬೇರೆಯದನ್ನು ಹೇಳುವುದು ಇರುತ್ತದೆ. ಅದಕ್ಕೆ ಅವರೂ ತಮ್ಮ ದಾರಿ ಹುಡುಕಿಕೊಂಡು ಹೋಗುವ ಈ ಮಾದರಿ ಮರಾಠಿ ರಂಗಭೂಮಿಯಲ್ಲಿ ಹೆಚ್ಚು ಕಾಣುತ್ತೇವೆ. ನಾಟಕದ ಪ್ರಯೋಗ ಉತ್ತರ ಕರ್ನಾಟಕ ಬಿಟ್ಟರೆ ಹೆಚ್ಚು ಶಿವಮೊಗ್ಗ ಜಿಲ್ಲೆಯಲ್ಲಿಯೇ ಆಗಿದೆ. ನನಗೆ ಇದು ತುಂಬ ಇಷ್ಟದ ಜಿಲ್ಲೆ. ಇಲ್ಲಿ 100ನೇ ಪ್ರಯೋಗ ಮಾಡಿದರೆ ಅದಕ್ಕೆ ಅರ್ಥವಿರುತ್ತದೆ ಎಂಬ ಕಾರಣಕ್ಕೆ ಇಲ್ಲಿ ಭೂಮಿಕೆ ಸಿದ್ಧಪಡಿಸಿದ್ದೇವೆ’ ಎಂದು ಅಕ್ಷತಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.