
ಆನವಟ್ಟಿ ಇಂದಿರಾ ಕ್ಯಾಟೀನ್
ಆನವಟ್ಟಿ: ಮೂರು ವರ್ಷಗಳ ಹಿಂದೆ ಆನವಟ್ಟಿಗೆ ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದರೂ, ವಿಳಂಬ ಕಾಮಗಾರಿ ಇದೀಗ ಅಂತಿಮ ಹಂತ ತಲುಪಿದ್ದು, ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.
ಪಟ್ಟಣದ ಬಡ ಜನರ ಅನುಕೂಲಕ್ಕಾಗಿ ಸಚಿವ ಎಸ್.ಮಧು ಬಂಗಾರಪ್ಪ ಮಂಜೂರು ಮಾಡಿಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಪಟ್ಟಣದ ಯಾವ ಜಾಗದಲ್ಲಿ ಆರಂಭಿಸಬೇಕು ಎಂಬ ವಿಷಯದಲ್ಲಿ ಗೊಂದಲ ಉಂಟಾಗಿತ್ತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯು ಸಾರ್ವಜನಿಕರ ಸಭೆ ಕರೆದು ಚರ್ಚಿಸಿ ಸೂಕ್ತ ಸ್ಥಳ ಆಯ್ಕೆ ಮಾಡಿ ಕಾಮಗಾರಿ ಆರಂಭಿಸಬೇಕಾಗಿತ್ತು. ಆದರೆ, ಏನೂ ಮಾಡದೆ, ನಾಡಕಚೇರಿ ಮುಂದೆ ಜಾಗ ನಿಗದಿಪಡಿಸಿದರು. ಕಾಮಗಾರಿ ಆರಂಭವಾಗುತ್ತಲೇ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ಕೆಲವರು ಪಟ್ಟಣ ಪಂಚಾಯಿತಿಯಲ್ಲಿ ಮೌಕಿಕ ದೂರು ನೀಡಿದರೂ, ಪ್ರಯೋಜನಾವಾಗಲಿಲ್ಲ.
ಪಟ್ಟಣ ಪಂಚಾಯಿತಿ ಹಾಗೂ ನಾಡಕಚೇರಿ ಅಕ್ಕಪಕ್ಕದಲ್ಲಿವೆ. ಪಂಚಾಯಿತಿಗೆ ರಾಷ್ಟ್ರೀಯ ಹಬ್ಬ, ಸಭೆ, ಸಮಾರಂಭ ನಡೆಸಲು ಜಾಗವಿರುವುದೇ ಸ್ವಲ್ಪ. ಅದರಲ್ಲೂ ಕ್ಯಾಂಟೀನ್ ನಿರ್ಮಾಣ ಮಾಡಿದರೆ ಜಾಗವೇ ಇಲ್ಲದಂತೆ ಆಗುತ್ತದೆ. ಬಸ್ ನಿಲ್ದಾಣ, ಆಸ್ಪತ್ರೆ ಹಾಗೂ ಇತರ ಕಚೇರಿಗಳಿಂದ ಈ ಜಾಗ ದೂರವಿರುವುದರಿಂದ ಈ ಸರ್ಕಾರದ ಯೋಜನೆ ಸಾರ್ವಜನಿಕರಿಗೆ ತಲುಪುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು.
ಕ್ಯಾಂಟೀನ್ ಕಟ್ಟಡದ ಕಾಮಗಾರಿ ಅರ್ಧದಷ್ಟು ಆಗಿತ್ತಾದರೂ ಕೆಲವರು ಸಚಿವ ಮಧು ಬಂಗಾರಪ್ಪ ಅವರಿಗೆ ಗೊಂದಲದ ವಿಷಯ ತಿಳಿಸಿದ್ದರಿಂದ ಸ್ಥಳದ ಪರಿಶೀಲನೆ ನಡೆಸಿ, ಆಸ್ಪತ್ರೆ ಆವರಣದಲ್ಲಿ ನಿರ್ಮಿಸುವಂತೆ ಸೂಚಿಸಿದ್ದರು.
ಕ್ಯಾಂಟೀನ್ ಅರ್ಧ ಕಾಮಗಾರಿ ಆಗಲು ಒಂದು ವರ್ಷ ಕಳೆದಿತ್ತು. ಸಚಿವರು ಸ್ಥಳಾಂತರ ಮಾಡಲು ಹೇಳಿದ ಮೇಲೆ, ದೊಡ್ಡ– ದೊಡ್ಡ ಸಿಮೆಂಟ್ ಗೋಡೆಗಳನ್ನು ಕಿತ್ತು ಆಸ್ಪತ್ರೆ ಆವರಣಕ್ಕೆ ಸಾಗಿಸಲು ಮತ್ತು ಆಸ್ಪತ್ರೆ ಜಾಗಕ್ಕೆ ಇದ್ದ ತೊಡಕುಗಳನ್ನು ನಿವಾರಣೆ ಮಾಡಿಕೊಳ್ಳಲು ಮತ್ತೊಂದು ವರ್ಷ ಕಳೆಯಿತು. ಇದೀಗ ಕ್ಯಾಂಟೀನ್ ಉದ್ಘಾಟನೆಗೆ ಸನ್ನದ್ಧವಾಗಿದ್ದು, ಕೆಲವು ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿವೆ.
ಆಸ್ಪತ್ರೆ ಎದುರು ಭಾರಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ಆಟೊ ನಿಲ್ಲಿಸಲು ಜಾಗ ಕೊಟ್ಟರೆ, ಕೆಲ ಸ್ಥಳೀಯ ಆಟೊ ಮಾಲೀಕರು ತಮ್ಮದೇ ಜಾಗ ಎಂಬಂತೆ ವತ್ತಿಸುತ್ತಿದ್ದಾರೆ. ಅಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲೂ ಬಿಡುವುದಿಲ್ಲ. ಅಲ್ಲಿ ಖಾಲಿ ಜಾಗವಿದೆಯಾದರೂ ಬೇರೆಯವರು ವಾಹನಗಳನ್ನು ನಿಲ್ಲಿಸದಂತೆ ಪರದೆ ಕಟ್ಟಿದ್ದಾರೆ. ತುರ್ತು ಆಂಬುಲೆನ್ಸ್‌ಗೂ ಜಾಗ ನೀಡುವುದಿಲ್ಲ. ಮಳೆಗಾಲದಲ್ಲಿ ಶಾಲೆಗಳ ವಿದ್ಯಾರ್ಥಿಗಳಿಗೂ ನಿಲ್ಲುವುದಕ್ಕೆ ಬಿಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
‘ಆಸ್ಪತ್ರೆ ಮುಂಭಾಗ ಶನಿವಾರ ಸಂತೆ ಇರುವುದರಿಂದ ಸಾಕಷ್ಟು ವಾಹನಗಳು ನಿಲ್ಲುತ್ತವೆ. ಇಲ್ಲಿ ಇಂದಿರಾ ಕ್ಯಾಂಟೀನ್‌ಗೆ ಬರುವ ಗ್ರಾಹಕರ ವಾಹನ ಹಾಗೂ ಆಸ್ಪತ್ರೆಯ ರೋಗಿಗಳನ್ನು ತರುವ ವಾಹನಕ್ಕೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿ
ಸಂದೀಪ್ ಒತ್ತಾಯಿಸಿದರು.
ಇನ್ನೂ ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ’ ಎಂದು ಪ.ಪಂ. ನಾಮ ನಿರ್ದೇಶನ ಸದಸ್ಯ ಹೇಳಿದರು
ಪಟ್ಟಣ ಪಂಚಾಯಿತಿಯಿಂದ ಕ್ಯಾಂಟೀನ್‌ನ ಸುತ್ತ ಕೆಲವೊಂದು ಸಣ್ಣ– ಪುಟ್ಟ ಕಾಮಗಾರಿ ನಡೆಯುತ್ತಿವೆ. ಆದಷ್ಟು ಬೇಗ ಮುಗಿಸಲಾಗುವುದುಶಂಕರ್, ಮುಖ್ಯಾಧಿಕಾರಿ
ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಮಾಡಿಸಿದ್ದ ರಿಂದ, ಹಳ್ಳಿಯಿಂದ ಬರುವ ರೋಗಿಗಳಿಗೆ, ಕೂಲಿ ಕಾರ್ಮಿಕರಿಗೆ, ಖಾಸಗಿ ಉದ್ಯೋಗಿಗಳಿಗೆ, ಸಣ್ಣ ಪುಟ್ಟ ತಿರುಗಾಡಿ ವ್ಯಾಪಾರ ಮಾಡುವವರಿಗೆ ಅನುಕೂಲವಾಗುತ್ತದೆಸುರೇಶ್ ಮಸಾಲ್ತಿ,ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.