ADVERTISEMENT

ಶಿವಮೊಗ್ಗ: ಕೊರೊನಾ ವಾರಿಯರ್‌ ಸೇವೆಗೆ ಶ್ಲಾಘನೆ- ಸನ್ಮಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 6:47 IST
Last Updated 23 ಅಕ್ಟೋಬರ್ 2021, 6:47 IST
ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಆರೋಗ್ಯ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿಯ ಕೊರೊನಾ ಲಸಿಕೆ ಅಭಿಯಾನ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು.
ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಆರೋಗ್ಯ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿಯ ಕೊರೊನಾ ಲಸಿಕೆ ಅಭಿಯಾನ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು.   

ಶಿವಮೊಗ್ಗ: ಅಪಪ್ರಚಾರದ ಮಧ್ಯೆಯೂ ದೇಶದ ಜನರಿಗೆ 100 ಕೋಟಿ ಕೊರೊನಾ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಸಹಕರಿಸಿದ ಕೊರೊನಾ ವಾರಿಯರ್‌ಗಳ ಸೇವೆ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಶ್ಲಾಘಿಸಿದರು.

ಕುವೆಂಪು ರಸ್ತೆಯಲ್ಲಿನ ಆರೋಗ್ಯ ತರಬೇತಿ ಕೇಂದ್ರದಲ್ಲಿ ‘ಜಿಲ್ಲಾ ಬಿಜೆಪಿ ಕೊರೊನಾ ಲಸಿಕೆ ಅಭಿಯಾನ’ ಶುಕ್ರವಾರಕೊರೊನಾ ವಾರಿಯರ್‌ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಸಿಕೆ ಉತ್ಪಾದನೆಯ ಆರಂಭದಲ್ಲಿ ವಿರೋಧಪಕ್ಷಗಳು ಇದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಇದನ್ನು ಪಡೆದರೆ ಮಕ್ಕಳಾಗುವುದಿಲ್ಲ ಎಂದೆಲ್ಲಾ ಅಪಪ್ರಚಾರ ಮಾಡಿ ಜನರಲ್ಲಿ ಭೀತಿ ಉಂಟು ಮಾಡಿದ್ದರು. ಅಪಪ್ರಚಾರದ ಮಧ್ಯೆಯೂ ಸಾರ್ವಜನಿಕರ ಮನವೊಲಿಸಿ 100 ಕೋಟಿ ಲಸಿಕೆ ನೀಡುವುದರ ಮೂಲಕ ವಿಶ್ವದಲ್ಲೇ ಯಾವ ದೇಶವೂ ಮಾಡದ ಸಾಧನೆ ಮಾಡಿದ್ದಾರೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಇದು ದೇಶದ ವಿಜ್ಞಾನಿಗಳ, ವೈದ್ಯರ, ಶುಶ್ರೂಷಕಿಯರ, ಆರೋಗ್ಯ ಇಲಾಖೆಯ ಎಲ್ಲಾ ನೌಕರರ ಸಾಧನೆ ಎಂದು ಹೇಳುವುದರ ಮೂಲಕ ಮೋದಿ ಪ್ರಧಾನಿ ಸ್ಥಾನದ ಘನತೆ ಹೆಚ್ಚಿಸಿದ್ದಾರೆ ಎಂದು ಪ್ರಶಂಸಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲಸಿಕಾ ಅಭಿಯಾನದ ಸಂಚಾಲಕ ಎಸ್.ದತ್ತಾತ್ರಿ, ‘ದೇಶದಲ್ಲಿ ಹಿಂದೆ ಹಲವು ಮಾರಣಾಂತಿಕ ರೋಗಗಳು ಬಂದಾಗ ಲಸಿಕೆ ಕಂಡುಹಿಡಿದು ಅದನ್ನು ಪೂರೈಸಲು ಹತ್ತಾರು ವರ್ಷ ತೆಗೆದುಕೊಂಡಿದ್ದಾರೆ. ಆದರೆ, ಕೊರೊನಾ ಹರಡಿದಾಗ ಕೇವಲ 9 ತಿಂಗಳಲ್ಲಿ ಲಸಿಕೆ ಕಂಡುಹಿಡಿದು, 100 ಕೋಟಿ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಲಾಗಿದೆ. ಇದರ ಹಿಂದೆ ಜಿಲ್ಲಾ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯ ಶ್ರಮವಿದೆ’ ಎಂದರು.

ಲಸಿಕಾ ಅಭಿಯಾನದ ರೂವಾರಿಗಳಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಡಾ.ನಾಗರಾಜ್ ನಾಯ್ಕ, ಶೂಶ್ರೂಷಕಿಯರು ಹಾಗೂ ‘ಡಿ’ ದರ್ಜೆ ನೌಕರರನ್ನು ಸನ್ಮಾನಿಸಲಾಯಿತು.

ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮೇಯರ್ ಸುನಿತಾ ಅಣ್ಣಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಮೆಗ್ಗಾನ್ ಅಧೀಕ್ಷಕ ಡಾ. ಶ್ರೀಧರ್, ಡಾ. ಕಿರಣ್, ಡಾ. ಸಿದ್ಧನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.