ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೊದಲು ಹಕ್ಕುಪತ್ರ ಕೊಡಿ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 4:47 IST
Last Updated 4 ಜನವರಿ 2026, 4:47 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ‘ಬೆಂಗಳೂರಿನ ಕೋಗಿಲು ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ ಅನ್ಯಭಾಷಿಕರಿಗೆ ಸರ್ಕಾರಿ ಮನೆಗಳನ್ನು ಹಂಚುವ ಮೊದಲು ಮಲೆನಾಡಿನಲ್ಲಿ 60 ವರ್ಷಗಳ ಹಿಂದೆ ಮನೆ, ಜಮೀನು ಕಳೆದುಕೊಂಡಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಮೊದಲು ನೆಲೆ ಕಲ್ಪಿಸಲಿ’ ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

‘ಶರಾವತಿ ಮುಳುಗಡೆ ಸಂತ್ರಸ್ತರು ವೈಯಕ್ತಿಕ ಕಾರಣಕ್ಕೆ ಜಮೀನು, ಮನೆಗಳ ಬಿಟ್ಟು ಬಂದವರಲ್ಲ. ನಾಡಿಗೆ ಬೆಳಕು ಕೊಡುವ ಉದ್ದೇಶದಿಂದ ನೆಲೆ ಕಳೆದುಕೊಂಡವರು. ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆ ಆದವರನ್ನು ಸರ್ಕಾರವೇ ಲಾರಿಯಲ್ಲಿ ಕರೆ ತಂದು ಅರಣ್ಯ ಪ್ರದೇಶದಲ್ಲಿ ಬಿಟ್ಟಿತ್ತು’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

1960 ರಿಂದ 70ರವರೆಗೂ ಸರ್ಕಾರವೇ ಶರಾವತಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಿದೆ. ಆದರೆ ಇದುವರೆಗೂ ಹಕ್ಕುಪತ್ರಗಳ ನೀಡಿಲ್ಲ. ಇದರಿಂದ ಬಹುತೇಕರಿಗೆ ಭೂಮಿ ಹಕ್ಕು ಸಿಕ್ಕಿಲ್ಲ. ಅವರು ಎಲ್ಲೋ ಕಾಡಂಚಿನಲ್ಲಿ ಮನೆಗಳ ಕಟ್ಟಿಕೊಂಡು ಬದುಕುತ್ತಿದ್ದಾರೆ. ಸರ್ಕಾರ ಶರಾವತಿ ಸಂತ್ರಸ್ತರ ಬಗ್ಗೆ ನಿಷ್ಕಾಳಜಿ ತೋರಿಸದೇ ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.

ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಮೊದಲು ಹಕ್ಕುಪತ್ರ ಕೊಡಲಿ. ಅದನ್ನು ಬಿಟ್ಟು ಕೋಗಿಲು ಬಳಿ ಅಕ್ರಮವಾಗಿ ನೆಲೆಸಿದವರಿಗೆ ಫ್ಲಾಟ್‌ಗಳ ವಿತರಿಸಿದರೆ ಮುಳುಗಡೆ ಸಂತ್ರಸ್ತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಣಗೆರೆ ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಹೆದ್ದೂರು ನವೀನ್, ಪ್ರಮುಖರಾದ ಹೂವಪ್ಪ ಕೂಡಿ, ಅಶೋಕ್ ಕಿರುವಾಸೆ, ಸುಧಾಕರ್, ಬಿ.ಎಂ. ಕೃಷ್ಣಮೂರ್ತಿ, ರಾಮಣ್ಣ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.