ADVERTISEMENT

ಅರತೊಳಲು–ಕೈಮರ: ಅಪಘಾತ ಇಲ್ಲಿ ಸಾಮಾನ್ಯ, ಜೀವಕ್ಕೆ ಬೆಲೆ ಇಲ್ಲ

ವೆಂಕಟೇಶ ಜಿ.ಎಚ್.
Published 5 ಜನವರಿ 2026, 5:14 IST
Last Updated 5 ಜನವರಿ 2026, 5:14 IST
ಕೈಮರದಲ್ಲಿ ನಾಲ್ಕು ರಸ್ತೆ ಸಂಧಿಸುವ ಸ್ಥಳದಲ್ಲಿ ವಾಹನಗಳ ಅಡ್ಡಾದಿಡ್ಡಿ ಓಡಾಟ
ಕೈಮರದಲ್ಲಿ ನಾಲ್ಕು ರಸ್ತೆ ಸಂಧಿಸುವ ಸ್ಥಳದಲ್ಲಿ ವಾಹನಗಳ ಅಡ್ಡಾದಿಡ್ಡಿ ಓಡಾಟ   

ಶಿವಮೊಗ್ಗ: ಹೆದ್ದಾರಿಯ ನುಣುಪಿನೊಂದಿಗೆ ಸ್ಪರ್ಧೆಗೆ ಬಿದ್ದ ವಾಹನಗಳ ವೇಗ ಹಾಗೂ ಎಡ–ಬಲಕ್ಕೆ ರಸ್ತೆ ಕಾಣದಂತೆ ಎದ್ದು ನಿಂತ ಕಟ್ಟಡ, ಫ್ಲೆಕ್ಸ್‌ಗಳ ಭರಾಟೆ ಭದ್ರಾವತಿ ತಾಲ್ಲೂಕಿನ ಅರತೊಳಲು ಕೈಮರದ ಹೃದಯ ಭಾಗವನ್ನು ಅಕ್ಷರಶಃ ಅಪಾಯಕಾರಿ ವಲಯವಾಗಿ ಮಾರ್ಪಡಿಸಿದೆ. ಅಪಘಾತಗಳು ನಿತ್ಯದ ಮಾತಾಗಿವೆ. ರಸ್ತೆ ದಾಟಲು, ಬಸ್ ಹತ್ತಲು ಬರುವವರು, ವಾಹನ ಸವಾರರು ಜೀವ ಕೈಯಲ್ಲಿಡಿದು ಸಾಗಬೇಕಿದೆ.

ಕೈಮರದಲ್ಲಿ ಶಿವಮೊಗ್ಗ–ಚೆನ್ನಗಿರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಭದ್ರಾವತಿ, ಹೊನ್ನಾಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಸಂಧಿಸುತ್ತವೆ. ಕಳೆದೊಂದು ವಾರದಲ್ಲಿ ಕೈಮರದಲ್ಲಿ 10 ಅಪಘಾತಗಳು ನಡೆದಿವೆ. ಪಾದಚಾರಿಗಳು, ವಾಹನ ಸವಾರರು ಗಾಯಗೊಂಡಿದ್ದಾರೆ.

ಕೈಮರದಲ್ಲಿ ದಸರಾ ನಂತರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಆಯುಧ ಪೂಜೆ ದಿನ ಶ್ರೀನಿವಾಸಪುರದ ಹನುಮಂತನಾಯ್ಕ ಕುಂಬಳ ಕಾಯಿ ತರಲು ಬಂದವರು ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಟ್ಟೆಹಳ್ಳಿಯ ವೃದ್ಧರೊಬ್ಬರು ಅಪಘಾತದಿಂದ ತಲೆಗೆ ತೀವ್ರ ಪೆಟ್ಟು ತಿಂದು ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

ನಾಲ್ಕು ದಿಕ್ಕಿನ ರಸ್ತೆಗಳು ಸಂಧಿಸುವ ಈ ಜಾಗದಲ್ಲಿ ವೃತ್ತ ನಿರ್ಮಿಸಿಲ್ಲ. ವಾಹನ ಸವಾರರ ಸುರಕ್ಷತೆಗೆ ಸ್ಪೀಡ್ ಬ್ರೇಕರ್ ಅಳವಡಿಸಿಲ್ಲ. ಸಿಗ್ನಲ್ ಇಲ್ಲ. ರಸ್ತೆ ಪಕ್ಕದಲ್ಲಿ ಎಚ್ಚರಿಕೆಯ ಫಲಕಗಳೂ ಇಲ್ಲ. ಇದರ ನಡುವೆ ಕೈಮರದಲ್ಲಿ ರಸ್ತೆ ಪಕ್ಕದಲ್ಲಿ ಅಳವಡಿಸುವ ದೊಡ್ಡ ದೊಡ್ಡ ಫ್ಲೆಕ್ಸ್‌ಗಳು ಎಡ–ಬಲದ ರಸ್ತೆಗಳಲ್ಲಿನ ವಾಹನಗಳು ಕಾಣದಂತೆ ಅಡ್ಡಿಯಾಗುತ್ತಿವೆ. ಇದು ಅಪಘಾತಕ್ಕೆ ದಾರಿ ಮಾಡಿಕೊಡುತ್ತಿವೆ.

ಹೆದ್ದಾರಿಗೆ ಅಂಟಿಕೊಂಡಂತೆಯೇ ಕೆಲವರು ಕಟ್ಟಡಗಳ ನಿರ್ಮಿಸಿದ್ದಾರೆ. ಜೊತೆಗೆ ಒತ್ತುವರಿಯೂ ರಸ್ತೆಯನ್ನು ಅಸಹನೀಯವಾಗಿಸಿದೆ. ಪಾರ್ಕಿಂಗ್‌ಗೆ ಜಾಗವಿಲ್ಲದೇ ವಾಹನಗಳನ್ನು ಹೆದ್ದಾರಿಯಲ್ಲಿಯೇ ನಿಲ್ಲಿಸಲಾಗುತ್ತದೆ. ಜೊತೆಗೆ ಬಸ್‌ ನಿಲ್ದಾಣವೂ ಇಲ್ಲ. ಬಸ್‌ಗಳಿಗೆ ಕಾಯುತ್ತಾ ಜನರು ರಸ್ತೆಯಲ್ಲಿಯೇ ನಿಲ್ಲಬೇಕಿದೆ. ದೊಡ್ಡ ವಾಹನಗಳು ನಾಲ್ಕು ರಸ್ತೆಗಳು ಸಂಧಿಸುವ ಸ್ಥಳದಲ್ಲಿಯೇ ನಿಲ್ಲಿಸುವುದರಿಂದ ದಿಢೀರನೆ ವಾಹನ ದಟ್ಟಣೆ ಉಂಟಾಗಿ ರಸ್ತೆಯಲ್ಲಿ ಜಾಮ್ ಆಗುತ್ತದೆ. ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಸ್ಕೂಲ್‌ಬಸ್‌ಗಳು ರಸ್ತೆಯ ಮೇಲೆ ನಿಲ್ಲುತ್ತವೆ. ಇದೂ ಕೂಡ ಅಪಾಯಕ್ಕೆ ಹಾದಿ ಮಾಡಿಕೊಡುತ್ತಿದೆ.

ಕೈಮರದಲ್ಲಿ ಚಹಾ ಸೇವಿಸಲು, ಉಪಹಾರ ಮಾಡಲು ಹಾಗೂ ಕೊಡು–ಕೊಳ್ಳುವಿಕೆಗೆ ಬರುವವರು ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಹೆದ್ದಾರಿ ಅತಿಕ್ರಮಿಸಿಕೊಂಡು ನಿಲ್ಲುವ ವ್ಯಾಪಾರಸ್ಥರು ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ ಎಂದು ಸ್ಥಳೀಯರಾದ ಶಿವರಾಜ್ ಹೇಳುತ್ತಾರೆ.

ಸ್ಪೀಡ್‌ ಬ್ರೇಕರ್, ಎಚ್ಚರಿಕೆ ಫಲಕಗಳು ಇಲ್ಲದ ಕಾರಣ ಶಿವಮೊಗ್ಗ–ಚನ್ನಗಿರಿ ನಡುವೆ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಕನಿಷ್ಟ 100 ಕಿ.ಮೀ ವೇಗದಲ್ಲಿ ಇರುತ್ತವೆ. ಫ್ಲೆಕ್ಸ್‌, ಕಟ್ಟಡಗಳ ಕಾರಣ ಆನವೇರಿ, ಭದ್ರಾವತಿ ಕಡೆಯಿಂದ ಬರುವ ವಾಹನಗಳಿಗೂ ಹೆದ್ದಾರಿಯಲ್ಲಿ ಬರುವ ವಾಹನಗಳು ಗೋಚರಿಸುವುದಿಲ್ಲ. ಅವು ದಿಢೀರನೆ ಹೆದ್ದಾರಿಗೆ ಬರುತ್ತಿದ್ದಂತೆಯೇ ಅದು ಅಪಘಾತಕ್ಕೆ ದಾರಿಯಾಗುತ್ತಿದೆ ಎನ್ನುತ್ತಾರೆ. 

‘ಈಗ ಅಡಿಕೆ ಹಂಗಾಮು ಬೇರೆ. ಹೀಗಾಗಿ ಟ್ರ್ಯಾಕ್ಟರ್‌ ಸೇರಿದಂತೆ ವಾಹನಗಳ ಓಡಾಟವೂ ಹೆಚ್ಚಾಗಿದೆ. ಸಂಜೆ ಹೊತ್ತು ಬೆಳಕು ಇರೊಲ್ಲ ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಿವೆ’ ಎಂದು ಅರತೊಳಲು ಗ್ರಾಮ ಪಂಚಾಯ್ತಿ ಸದಸ್ಯ ಸಂಗನಾಥ ಹೇಳುತ್ತಾರೆ.

ಕೈಮರದಲ್ಲಿನ ಸಮಸ್ಯೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಸಂಪರ್ಕಿಸಿದರೂ ಅರತೊಳಲು ಗ್ರಾಮ ಪಂಚಾಯ್ತಿ ಪಿಡಿಒ ದೊರೆ ಕರೆ ಸ್ವೀಕರಿಸಲಿಲ್ಲ.

ಕೈಮರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ ನಿಜ. ಸಂಜೆ ವೇಳೆ ಬೆಳಕಿನ ಸಮಸ್ಯೆ ನೀಗಿಸಲು ಹೈಮಾಸ್ಟ್ ದೀಪ ಅಳವಡಿಸಲು ಪಿಡಿಒ ಅವರೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡುವೆ.
– ಸಂಗನಾಥ, ಅರತೊಳಲು ಗ್ರಾಮ ಪಂಚಾಯ್ತಿ ಸದಸ್ಯ
ಗ್ರಾಮ ಪಂಚಾಯ್ತಿ ಹೊಳೆಹೊನ್ನೂರು ಪೊಲೀಸರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೀಗೆ ಎಲ್ಲರಿಗೂ ಹಲವು ಬಾರಿ ಮನವಿ ಮಾಡಿ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಕೋರಿದ್ದೇವೆ. ಆದರೆ ಯಾವುದೇ ಪರಿಹಾರ ದೊರೆತಿಲ್ಲ.
ಯಶವಂತ್ ಹನುಮಂತಾಪುರ, ನಿವಾಸಿ
ಕೈಮರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವೆ. ಅಪಘಾತ ತಪ್ಪಿಸಲು ಅಲ್ಲಿ ಬ್ಯಾರಿಕೇಡ್ ಸ್ಪೀಡ್‌ ಬ್ರೇಕರ್ ಹಾಕುವ ಜೊತೆಗೆ ಹೆದ್ದಾರಿಯಲ್ಲಿನ ಕೆಲವು ಸಂಚಾರ ಮಾನದಂಡಗಳನ್ನೊ ಒಳಗೊಂಡ ವ್ಯವಸ್ಥೆ ಮಾಡಲಾಗುವುದು.
– ಪ್ರಕಾಶ್ ರಾಥೋಡ್, ಡಿವೈಎಸ್ಪಿ, ಭದ್ರಾವತಿ ಉಪವಿಭಾಗ
ಟ್ರಾಫಿಕ್ ಜಾಮ್ ನೋಟ
ಕೈಮರದಲ್ಲಿ ಬಸ್ ನಿಲ್ದಾಣವಿಲ್ಲದೇ ರಸ್ತೆಯಲ್ಲೇ ಬಸ್‌ ಕಾಯುತ್ತಾ ನಿಲ್ಲಬೇಕಾದ ಅನಿವಾರ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.