ಶಿವಮೊಗ್ಗ: ಬೆಳೆಗಾರರ ಪಾಲಿಗೆ ಅಡಿಕೆ ಈಗ ಮರದೊಳಗಣ ಚಿನ್ನ. ಹೀಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆ ಪ್ರದೇಶ ವ್ಯಾಪಕವಾಗಿ ವಿಸ್ತರಣೆ ಆಗುತ್ತಿದೆ. ಇದರಿಂದ ಜಿಲ್ಲೆಯ ಪ್ರಮುಖ ಆಹಾರ ಬೆಳೆಗಳಾದ ಭತ್ತ, ಮುಸುಕಿನ ಜೋಳದ ಬೆಳೆ ಪ್ರದೇಶ ಕಣ್ಮರೆಯಾಗುತ್ತಿದೆ.
ತೋಟಗಾರಿಕೆ ಇಲಾಖೆ ಮಾಹಿತಿ ಅನ್ವಯ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಅಡಿಕೆ ಬೆಳೆ ಪ್ರದೇಶ ಮೂರುಪಟ್ಟು ಹೆಚ್ಚಳಗೊಂಡಿದೆ. 2015ರಲ್ಲಿ 50,820 ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆ ಇತ್ತು. 2025ರಲ್ಲಿ ಅದು 1,37,406 ಹೆಕ್ಟೇರ್‌ಗೆ ಏರಿಕೆಯಾಗಿದೆ.
ಆರೇಳು ವರ್ಷ ಶ್ರಮಪಟ್ಟರೆ ದೀರ್ಘಾವಧಿಗೆ ನಿಶ್ಚಿತ ಆದಾಯ ದೊರೆಯುವ ಭರವಸೆಯು ರೈತಾಪಿ ವರ್ಗಕ್ಕೆ ಅಡಿಕೆಯ ಬಗ್ಗೆ ಪ್ರೀತಿ ಹೆಚ್ಚಿಸಿದೆ. ಹೀಗಾಗಿ ಅಡಿಕೆಯು ತನ್ನ ಸಾಂಪ್ರದಾಯಿಕ ನೆಲೆಯಾಗಿದ್ದ ಮಲೆನಾಡಿನ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳ ಸೀಮೆಯನ್ನು ದಾಟಿದೆ. ಅಲ್ಲಿಗಿಂತ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ ತಾಲ್ಲೂಕುಗಳನ್ನೊಳಗೊಂಡ ಅರೆ ಮಲೆನಾಡು ಪ್ರದೇಶದಲ್ಲಿ ಅದರ ಘಮಲು ಹೆಚ್ಚಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ 42,150 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದರೆ, ಅರೆ ಮಲೆನಾಡು ಪ್ರದೇಶದಲ್ಲಿ ಅಡಿಕೆಯ ಪಾಲು 95,257 ಹೆಕ್ಟೇರ್.
ಭತ್ತ, ಮುಸುಕಿನ ಜೋಳಕ್ಕೆ ಕೊಕ್
‘ಅಡಿಕೆ ಬೆಳೆ ಪ್ರದೇಶದ ವಿಸ್ತರಣೆಗೂ ಮುನ್ನ ಶಿವಮೊಗ್ಗ ಜಿಲ್ಲೆ ಭತ್ತದ ಬೆಳೆಗೂ ಹೆಸರಾಗಿತ್ತು. ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬದಲ್ಲಿ ರೈತರು ಮುಸುಕಿನ ಜೋಳವನ್ನು ಹೆಚ್ಚು ಬೆಳೆಯುತ್ತಿದ್ದರು. ಆದರೆ ಈಗ ಅನ್ನದ ಬಟ್ಟಲು ಸಹ ಕುಗ್ಗಿದೆ. 2018ರಲ್ಲಿ 1,04,239 ಹೆಕ್ಟೇರ್‌ನಲ್ಲಿ ಇದ್ದ ಭತ್ತದ ವ್ಯಾಪ್ತಿ 2025ರಲ್ಲಿ 73,100 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ 2017ರಲ್ಲಿ 72,929 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿತ್ತು. ಈ ವರ್ಷ ಅದು 38,015 ಹೆಕ್ಟೇರ್‌ಗೆ ಕುಸಿದಿದೆ’ ಎಂದು ಶಿವಮೊಗ್ಗ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.
ಉತ್ತೇಜನಕ್ಕೆ ಸಿಕ್ಕದ ಸ್ಪಂದನೆ
‘ಅಡಿಕೆಯಿಂದ ಸಿಗುವ ಆದಾಯ ಬೇರೆ ಬೆಳೆಗಳಿಂದ ಸಿಗುವುದಿಲ್ಲ. ರೋಗ ಬಾಧೆಯ ಆತಂಕವೂ ಇಲ್ಲ. ಖರ್ಚು ಕಡಿಮೆ, ಆದಾಯವೂ ಖಾತರಿ ಎಂಬ ಭಾವನೆ ಬೆಳೆಗಾರರದ್ದು. ಆಹಾರ ಬೆಳೆ ಪ್ರೋತ್ಸಾಹಿಸಲು ಭತ್ತದ ಬೀಜ, ಔಷಧಿ, ಕೃಷಿ ಉಪಕರಣಗಳಿಗೆ ಸಬ್ಸಿಡಿ ಕೊಡುತ್ತಿದ್ದೇವೆ. ಆದರೂ ರೈತರಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್‌ಕುಮಾರ್ ಹೇಳುತ್ತಾರೆ.
‘ಆಹಾರೋತ್ಪಾದನೆಗೆ ಸೂಕ್ತ ಬೆಲೆ ಕೊಡಿ’
‘ಕಾಲುವೆ ನೀರಾವರಿ ಸೌಲಭ್ಯ ಕಲ್ಪಿಸಿರುವ ಪ್ರದೇಶದಲ್ಲಿ ಬಹುವಾರ್ಷಿಕ ಬೆಳೆ ಬೆಳೆಯಬಾರದು ಎಂಬ ನಿಯಮವಿದೆ. ಇಂತಹ ಕಡೆಗಳಲ್ಲಿ ಅಡಿಕೆ ಬೆಳೆಯುವುದು ನಿಯಮದ ಉಲ್ಲಂಘನೆ. ಹಾಗೆಂದು ಅದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವುದು ಕಷ್ಟ. ಬದಲಿಗೆ ಸರ್ಕಾರವು ಸ್ವಾಮಿನಾಥನ್ ವರದಿ ಜಾರಿಗೊಳಿಸಿ ಆಹಾರ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡಲಿ’ ಎಂದು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್.ಜಯಂತ್ ಒತ್ತಾಯಿಸುತ್ತಾರೆ. ಬೆಳೆಗಾರರನ್ನು ಮತ್ತೆ ಆಹಾರ ಬೆಳೆಗಳತ್ತ ಕರೆದೊಯ್ಯಲು ಸರ್ಕಾರದ ನೀತಿ ನಿರೂಪಣೆಯಲ್ಲಿಯೇ ಬದಲಾವಣೆಗಳು ಆಗಬೇಕಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.