ADVERTISEMENT

ಶಿವಮೊಗ್ಗ: ಅಡಿಕೆಗೆ ಎಲೆಚುಕ್ಕಿ, ಕೊಳೆ ರೋಗ ಬಾಧೆ: ಬೆಳೆಗಾರರಿಗೆ ತೀವ್ರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 4:59 IST
Last Updated 23 ಡಿಸೆಂಬರ್ 2025, 4:59 IST
ಶಿವಮೊಗ್ಗದಲ್ಲಿ ಸೋಮವಾರ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯ ನೋಟ
ಶಿವಮೊಗ್ಗದಲ್ಲಿ ಸೋಮವಾರ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯ ನೋಟ   

ಶಿವಮೊಗ್ಗ: ‘ಮಲೆನಾಡಿನಲ್ಲಿ ಎಲೆಚುಕ್ಕಿ ಮತ್ತು ಕೊಳೆ ರೋಗದಿಂದಾಗಿ ಅಡಿಕೆ ಮರಗಳು ನಾಶವಾಗುತ್ತಿವೆ. ನಿರೀಕ್ಷೆಗೂ ಮೀರಿ ಫಸಲು ನಷ್ಟವಾಗಿದೆ. ಇದರಿಂದ ಬೆಳೆಗಾರರು ಆರ್ಥಿಕವಾಗಿ ತತ್ತರಿಸಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ ಫಸಲು ಇಲ್ಲದೇ ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಬೇಕು’ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಂಎಡಿಬಿ) ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಆಗ್ರಹಿಸಿದರು.

ಎಲೆ ಚುಕ್ಕಿ ಹಾಗೂ ಕೊಳೆ ರೋಗಗಳಿಗೆ ಸಮಗ್ರ ಪರಿಹಾರ ಹುಡುಕಲು ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಇಲ್ಲಿನ ಎಂಎಡಿಬಿ ಕಚೇರಿಯಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲೆನಾಡಿನಲ್ಲಿ ಈಚೆಗೆ ಅಡಿಕೆ ಅತಿ ಹೆಚ್ಚು ರೋಗ ಬಾಧೆಗೆ ತುತ್ತಾಗುತ್ತಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಫಸಲು ನಷ್ಟವಾಗಿದೆ. ಮೇ ಎರಡನೇ ವಾರ ಆರಂಭವಾದ ಮಳೆ ನಾಲ್ಕು ತಿಂಗಳು ನಿರಂತರವಾಗಿ ಸುರಿದ ಪರಿಣಾಮ ಅಡಿಕೆ ಫಸಲು ಸಂಪೂರ್ಣ ನೆಲಕಚ್ಚಿದೆ ಎಂದರು.

ADVERTISEMENT

ವಿಪರೀತ ಮಳೆ, ಮಿತಿ ಮೀರಿದ ರಾಸಾಯನಿಕ ಔಷಧಿ ಬಳಕೆ, ಬದಲಾದ ಬೇಸಾಯ ಪದ್ಧತಿಯಿಂದ ಅಡಿಕೆ ಭವಿಷ್ಯ ಕಳೆದುಕೊಳ್ಳುವ ಹಾದಿಯಲ್ಲಿ ಸಾಗಿದೆ. ಐದಾರು ವರ್ಷಗಳ ಹಿಂದೆ ಕಂಡು ಬಂದ ಎಲೆಚುಕ್ಕಿ ರೋಗ ಅಡಿಕೆ ಮರಕ್ಕೆ ಮಾರಣಾಂತಿಕವಾಗಿ ಕಾಡುತ್ತಿದೆ ಎಂದು ತಿಳಿಸಿದರು.‌

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಪಕ್ಷಾತೀತವಾಗಿ ಒಂದಾಗಿ ಒತ್ತಡ ಹೇರಬೇಕಾದ ಅನಿವಾರ್ಯತೆ ಎದುರಾಗಿದೆ. ಅಡಿಕೆ ಬೆಳೆಗಾರರು ಶೀಘ್ರದಲ್ಲಿ ಇನ್ನೊಂದು ಸಭೆ ಸೇರಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದರು.

ರೈತ ಹೋರಾಟಗಾರ ತೀ.ನಾ.ಶ್ರೀನಿವಾಸ್‌ ಮಾತನಾಡಿ, ಒಂದು ಕಡೆ ಎಲೆಚುಕ್ಕಿ ರೋಗ ಬೆಳೆಗಾರರ ಬಾಧಿಸುತ್ತಿದ್ದರೆ, ಇನ್ನೊಂದು ಕಡೆ ಅರಣ್ಯ ಇಲಾಖೆಯಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗದಲ್ಲಿ ಇದು ವಿಪರೀತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ವಿವಿ ಪ್ರಾಧ್ಯಾಪಕ ಬಿ.ಗಂಗಾಧರ ನಾಯ್ಕ ಎಲೆ ಚುಕ್ಕಿ ರೋಗದ ಲಕ್ಷಣಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಸಹಕಾರ ಸೊಸೈಟಿ, ಅಧ್ಯಕ್ಷರು, ಅಡಿಕೆ ಬೆಳೆಗಾರರು ಇದ್ದರು.

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಔಷಧ ಸಂಶೋಧನೆ ನಿಟ್ಟಿನಲ್ಲಿ ಐದು ವರ್ಷಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದ ವಿಜ್ಞಾನಿಗಳ ತಂಡ ಈವರೆಗೂ ಪರಿಣಾಮಕಾರಿ ಫಲಿತಾಂಶ ಪಡೆದಿಲ್ಲ. ರೋಗ ಬಾಧೆ ಈ ವರ್ಷ ವಿಪರೀತದ ಹಂತಕ್ಕೆ ತಲುಪಿದೆ.
ಕಡಿದಾಳ್ ಗೋಪಾಲ್. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ
ಆಗುಂಬೆ ಮತ್ತೂರು ತೀರ್ಥಹಳ್ಳಿ ಕಸಬಾ ಹೋಬಳಿ ಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿದೆ. ನೂರಾರು ಎಕರೆ ತೋಟ ಎಲೆಚುಕ್ಕಿ ರೋಗಕ್ಕೆ ಬಲಿಯಾಗಿದೆ
ಆರ್.ಎಂ.ಮಂಜುನಾಥಗೌಡ ಎಂಎಡಿಬಿ ಅಧ್ಯಕ್ಷ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೋಗ ಅಧ್ಯಯನ ನಿಯಂತ್ರಣ ಹೆಸರಲ್ಲಿ ಒಂದಿಷ್ಟು ಅನುದಾನ ಬಿಡುಗಡೆ ಮಾಡಿ ಮೌನಕ್ಕೆ ಜಾರುತ್ತಿವೆ. ಆದರೆ ಸಂಬಂಧಿಸಿದ ಸಂಸ್ಥೆಗಳು ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿವೆ.
ಸುಧೀರ್ ಅಡಿಕೆ ಬೆಳೆಗಾರ
ಸಮಸ್ಯೆಗೆ ಪರಿಹಾರಕ್ಕೆ ಅಡಿಕೆ ಅಭಿವೃದ್ಧಿ ಮಂಡಳಿ ಅವಶ್ಯವಿದೆ. ಐಸಿಎಆರ್‌ ಅಡಿಯಲ್ಲಿ ನಿರ್ದಿಷ್ಟ ಬೆಳೆಗಳು ಸಂಶೋಧನಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ವಿಶೇಷ ಸಂಸ್ಥೆ ಕರ್ನಾಟಕದಲ್ಲಿ ಸ್ಥಾಪನೆಯಾಗಬೇಕು
ಪ್ರಕಾಶ್ ಕಮ್ಮರಡಿ ನೀತಿ ಆಯೋಗದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.