
ಶಿವಮೊಗ್ಗ: ಮಲೆನಾಡಿಗೆ ಸೀಮಿತವಾಗಿದ್ದ ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್) ರಾಜ್ಯದಲ್ಲಿ ಅಡಿಕೆ ಬೆಳೆಯುವ ಎಲ್ಲ ಜಿಲ್ಲೆಗಳಿಗೆ ವಹಿವಾಟು ವಿಸ್ತರಿಸಲು ಮುಂದಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಡಿಸೆಂಬರ್ 1ರಿಂದ ಅಡಿಕೆ ಖರೀದಿ ಕೇಂದ್ರ ಆರಂಭಿಸಿದೆ.
ಮ್ಯಾಮ್ಕೋಸ್ ಸದ್ಯ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳಿಗೆ ಸೀಮಿತವಾಗಿದ್ದು, ವಾರ್ಷಿಕ ₹ 1,400 ಕೋಟಿ ವಹಿವಾಟು ನಡೆಸುತ್ತಿದೆ.
‘ಮುಂದಿನ ನಾಲ್ಕು ವರ್ಷಗಳಲ್ಲಿ ಸಂಸ್ಥೆಯ ವಹಿವಾಟನ್ನು ₹ 2,500 ಕೋಟಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಅಡಿಕೆ ಬೆಳೆಯುತ್ತಿರುವ ರಾಜ್ಯದ 16 ಜಿಲ್ಲೆಗಳಿಗೂ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರಕನ್ನಡ, ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಹಾವೇರಿ, ಕೊಡಗು) ವಹಿವಾಟು ವಿಸ್ತರಿಸಲಿದ್ದೇವೆ’ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವಾ ಹೇಳಿದ್ದಾರೆ.
‘ಈ ಮೊದಲು ಕೆ.ಆರ್.ಪೇಟೆಯಲ್ಲಿ ಸಣ್ಣ ಬೆಳೆಗಾರರು ಸ್ಥಳೀಯ ಕೈ ವ್ಯಾಪಾರದವರಿಗೆ (ತೋಟಕ್ಕೆ ಹೋಗಿ ಖರೀದಿಸುವವರು) ಅಡಿಕೆ ಮಾರುತ್ತಿದ್ದರು. ಅತಿದೊಡ್ಡ ಬೆಳೆಗಾರರು ಚಿಕ್ಕಮಗಳೂರು ಜಿಲ್ಲೆ ಬೀರೂರು ಮಾರುಕಟ್ಟೆಗೆ ಒಯ್ಯುತ್ತಿದ್ದರು. ಸಾಗಣೆ ವೆಚ್ಚ ಪ್ರತಿ ಮೂಟೆಗೆ ₹200 ಕೊಡಬೇಕಿತ್ತು. ಕೈ ವ್ಯಾಪಾರಸ್ಥರು ಖರೀದಿ ವೇಳೆ 50 ಕೆ.ಜಿ ತೂಕದ ಅಡಿಕೆ ಮೂಟೆಗೆ 1,600 ಗ್ರಾಂ ತೂಕ ಕಳೆಯುತ್ತಿದ್ದರು. ಮನಸ್ಸಿಗೆ ಬಂದಂತೆ ಅಡಿಕೆ ದರ ನಿಗದಿ ಮಾಡುತ್ತಿದ್ದರು. ಜೊತೆಗೆ ಬೆಳೆಗಾರರು ಅಡಿಕೆ ಇಟ್ಟು ಪಡೆಯುತ್ತಿದ್ದ ಅಡಮಾನ ಸಾಲಕ್ಕೆ ಬಡ್ಡಿ ದರ ಕೂಡ ಹೆಚ್ಚು ವಿಧಿಸಲಾಗುತ್ತಿತ್ತು’ ಎನ್ನುತ್ತಾರೆ.
‘ಈಗ ಸಂಸ್ಥೆಯಿಂದ (ಮ್ಯಾಮ್ಕೋಸ್) ಆಯಾ ದಿನದ ಮಾರುಕಟ್ಟೆ ದರ ಆಧರಿಸಿ ಅಡಿಕೆ ಖರೀದಿ ಮಾಡಲಾಗುತ್ತಿದೆ. ಜೊತೆಗೆ ವಹಿವಾಟು ಪಾರದರ್ಶಕವಾಗಿದೆ. ಅಡಮಾನ ಸಾಲಕ್ಕೆ ಬಡ್ಡಿ ದರವೂ ಕಡಿಮೆ ಇದೆ. ಹೀಗಾಗಿ ರೈತರು ಸಂಸ್ಥೆಯ ಖರೀದಿಯತ್ತ ಆಸಕ್ತಿ ತೋರುತ್ತಿದ್ದಾರೆ. ಕಳೆದ 29 ದಿನಗಳಲ್ಲಿ 2,000 ಮೂಟೆ ಅಡಿಕೆ ಖರೀದಿ ಮಾಡಿದ್ದೇವೆ’ ಎಂದು ಶ್ರೀಕಾಂತ್ ಬರುವಾ ಮಾಹಿತಿ ನೀಡಿದರು.
ಶೀಘ್ರ ಏಳು ಕಡೆ ಖರೀದಿ ಕೇಂದ್ರ: ವಹಿವಾಟು ವಿಸ್ತರಣೆಯ ಭಾಗವಾಗಿ ಮ್ಯಾಮ್ಕೋಸ್ ಶೀಘ್ರ ತುಮಕೂರು ಜಿಲ್ಲೆ ಕುಣಿಗಲ್, ಶಿರಾ, ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ, ದಾವಣಗೆರೆ, ಹೊನ್ನಾಳಿ, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ಖರೀದಿ ಕೇಂದ್ರ ಆರಂಭಿಸಲು ಸಿದ್ಧತೆ ನಡೆಸಿದೆ. ಹಂತಹಂತವಾಗಿ ಉಳಿದ ಜಿಲ್ಲೆಗಳಲ್ಲೂ ಖರೀದಿ ಆರಂಭಿಸಲಿದ್ದೇವೆ ಎನ್ನುತ್ತಾರೆ.
ಮಧ್ಯವರ್ತಿಗಳ ಶೋಷಣೆ ತಪ್ಪಿಸಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವುದು ಸಂಸ್ಥೆಯ ಆಶಯ. ನಮಗೆ ಖರೀದಿ ವಿಕ್ರಯಕ್ಕೆ ನಿರ್ದಿಷ್ಟ ಕಾರ್ಯವ್ಯಾಪ್ತಿ ಇಲ್ಲ. ಹೀಗಾಗಿ ಅಡಿಕೆ ಬೆಳೆಯುವ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಕೇಂದ್ರೀಕರಿಸಲು ನಿರ್ಧರಿಸಿದ್ದೇವೆಶ್ರೀಕಾಂತ್ ಬರುವಾ ವ್ಯವಸ್ಥಾಪಕ ನಿರ್ದೇಶಕ ಮ್ಯಾಮ್ಕೋಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.