ADVERTISEMENT

ಹಳೆಯ ಪಿಂಚಣಿ ಯೋಜನೆ ಬೇಡಿಕೆಗೆ ಆಯನೂರು ಮಂಜುನಾಥ್ ಬೆಂಬಲ

ಇದು ಲಕ್ಷಾಂತರ ನೌಕರರ ಬದುಕಿನ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 13:19 IST
Last Updated 22 ಜನವರಿ 2023, 13:19 IST
ವೋಟ್ ಫಾರ್ ಒಪಿಎಸ್ ಅಭಿಯಾನ
ವೋಟ್ ಫಾರ್ ಒಪಿಎಸ್ ಅಭಿಯಾನ   

ಶಿವಮೊಗ್ಗ: ’ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಲಕ್ಷಾಂತರ ನೌಕರರ ಕುಟುಂಬಗಳ ಬದುಕಿನ ಪ್ರಶ್ನೆಯಾಗಿ ಕಾಡುತ್ತಿದೆ. ಹೋರಾಟ ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನು ಗೌರವಿಸಬೇಕು. ಸರ್ಕಾರ ಹೋರಾಟಗಾರರ ನೋವು ಅರ್ಥ ಮಾಡಿಕೊಳ್ಳಬೇಕು‘ ಎಂದು ವಿಧಾನ‍ಪರಿಷತ್‌ ಸದಸ್ಯ ಆಯನೂರು ಮಂಜುನಾಥ ಹೇಳಿದರು.

ನಗರದಲ್ಲಿ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಜಿಲ್ಲಾಮಟ್ಟದ ಸಮಾವೇಶ, ವೋಟ್ ಫಾರ್ ಒಪಿಎಸ್ ಅಭಿಯಾನ ಹಾಗೂ ರಾಜ್ಯ ಕಾರ್ಯಕಾರಣಿ ಸಭೆ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ದುಡಿದು ತಿನ್ನುವವರಿಗೆ ನಮ್ಮ ಬೆಂಬಲವಿದೆಯೇ ವಿನಃ ಹೊಡೆದು ತಿನ್ನುವವರಿಗಿಲ್ಲ. ಪ್ರತಿಪಕ್ಷದಲ್ಲಿ ಇದ್ದಾಗ ಮಾತನಾಡಬಹುದು. ಹೋರಾಟ ಮಾಡಬಹುದು. ಆದರೆ ಆಡಳಿತ ಪಕ್ಷದಲ್ಲಿದ್ದಾಗ ಧ್ವನಿ ಎತ್ತುವುದು ಕಷ್ಟ. ಆದರೆ ನೌಕರರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುವುದಕ್ಕೂ ಸಿದ್ಧ. ನಿಮ್ಮ ಪರವಾಗಿ ಧ್ವನಿ ಎತ್ತೇ ಎತ್ತುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

ನೌಕರರ ನ್ಯಾಯಬದ್ಧ ಹೋರಾಟ ಬೆಂಬಲಿಸುತ್ತಿದ್ದೇನೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ನನ್ನ ಬೆಂಬಲ ಒಪಿಎಸ್ ಗೆ ನೀಡುತ್ತೇನೆ ಎಂದರು.

ಸಂಘಟನೆ ಜಿಲ್ಲಾ ಘಟಕದ ಕೆ.ಎನ್.ರಾಘವೇಂದ್ರ ಪ್ರಸ್ತಾವಿಕ ಮಾತನಾಡಿ, ಎನ್‌ಪಿಎಸ್ 2006ರಲ್ಲಿ ಜಾರಿ ಆದಾಗ ಅದರ ಕರಾಳತೆ ಯಾರಿಗೂ ತಿಳಿಯಲಿಲ್ಲ. ಅದನ್ನು ಅರಿಯಲು ನಾಲ್ಕು ವರ್ಷ ಬೇಕಾಯಿತು. ಮೂರೂವರೆ ಸಾವಿರಕ್ಕೂ ಅಧಿಕ ಜನರ ಏಳೆಂಟು ವರ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಇಲ್ಲಿ ಗುರಿ ಇದೆ. ಸ್ಪಷ್ಟತೆ, ನಿರ್ದಿಷ್ಟತೆ ಇದೆ. ಮಾಡು ಇಲ್ಲವೇ ಮಾಡಿ ಹೋರಾಟ ಇದಾಗಿದೆ ಎಂದರು.

ರಾಮನಗರದಿಂದ ಪ್ರಾರಂಭಗೊಂಡ ಹೋರಾಟ ಇಂದು ಶಿವಮೊಗ್ಗದಲ್ಲಿ ದೊಡ್ಡದಾಗಿ ರೂಪುಗೊಂಡಿದೆ. ರಾಜ್ಯ ಕಾರ್ಯಕಾರಣಿಯಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಮುಂದಿನ ಹೋರಾಟಕ್ಕೆ ಈ ಸಮಾವೇಶ ದಿಕ್ಸೂಚಿ ಆಗಿದೆ ಎಂದರು.

ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣ ಮಾತನಾಡಿ, ’ಇದು ನೌಕರರಿಗೆ ಸಂಧ್ಯಾ ಕಾಲದಲ್ಲಿ ಬದುಕು ರೂಪಿಸುವ ಹೋರಾಟ ಇದಾಗಿದೆ. ಹಿಂದಿನ ಕಾಲದಲ್ಲಿ ಮಾಟ, ಮಂತ್ರ, ತಂತ್ರಗಳು ಕೆಲಸ ಮಾಡುತ್ತಿದ್ದವು. ಆದರೆ ಇಂದು ತಂತ್ರ, ಕುತಂತ್ರ, ಷಡ್ಯಂತ್ರಗಳು ನಡೆಯುತ್ತಿವೆ’ ಎಂದು ಕಿಡಿಕಾರಿದರು.

ಸಮಾಜದಲ್ಲಿ ಎರಡು ವರ್ಗದ ಜನರಿದ್ದಾರೆ. ಹೋರಾಟ ಮಾಡಿದರೂ ಮಾತನಾಡುತ್ತಾರೆ. ಹೋರಾಟದಿಂದ ಹಿಂದೆ ಸರಿದರೂ ಮಾತನಾಡುತ್ತಾರೆ. ನೌಕರರಲ್ಲಿ ಸಾಕಷ್ಟು ಗೊಂದಲಗಳಿರುವುದು‌ ನಿಜ. ನಾವು ಯಾವುದೇ ಸರ್ಕಾರ, ಪಕ್ಷ, ವ್ಯಕ್ತಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ನೌಕರರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಹೋರಾಟ ಮಾಡುವುದು ನಮ್ಮ ಹಕ್ಕಾಗಿದೆ. ಸಂಘಟನೆಗೆ ಶಕ್ತಿ ಇದೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.

ದೇಶದ ಸಂವಿಧಾನವನ್ನೇ 120 ಬಾರಿ ತಿದ್ದುಪಡಿ ಮಾಡಿದವರಿಗೆ ಒಂದೇ ಒಂದು ಕಾಯ್ದೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲವಾ ?, ಪಂಜಾಬ್, ಛತ್ತೀಸ್‌ಘಡ, ಹಿಮಾಚಲ ಪ್ರದೇಶ ಸೇರಿ ಹಲವೆಡೆ ಸಾಧ್ಯವಾಗಿರುವ ಕೆಲಸ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ, ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಹಿರಿಯ ಉಪಾಧ್ಯಕ್ಷ ಚಂದ್ರಕಾಂತ ತಲವಾರ, ಕೋಶಾಧ್ಯಕ್ಷ ಕೇಶವ ಪ್ರಸಾದ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಪ್ರಭಾಕರ್, ಮುಖಂಡರಾದ ಎಲ್.ದಯಾನಂದ್, ಮಹಾಬಲೇಶ್ವರ ಹೆಗಡೆ, ರಾಧಾ, ಶಶಿಕಲಾ, ರವಿ ಅಸೂಟಿ, ಮಹಾದೇವ ಶರ್ಮ, ಸುರೇಶ್, ಚಂದ್ರನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.