ADVERTISEMENT

ರಾಮನಗರ ಘಟನೆ ಮೈತ್ರಿ ಪಕ್ಷಗಳ ಕೃತ್ಯ: ಆಯನೂರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 12:20 IST
Last Updated 1 ನವೆಂಬರ್ 2018, 12:20 IST

ಶಿವಮೊಗ್ಗ:ಮುಖ್ಯಮಂತ್ರಿ ಪತ್ನಿ ಅನಿತಾ ಕುಮಾರಸ್ವಾಮಿ ಸೋತರೆ ಸಮ್ಮಿಶ್ರ ಸರ್ಕಾರಕ್ಕೆ ಮುಖಭಂಗವಾಗುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಮೇಲೆ ಒತ್ತಡ ತಂದು ಕಣದಿಂದ ನಿವೃತ್ತಿಯಾಗುವ ಹೇಳಿಕೆ ನೀಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದರು.

ಇದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಅವರ ಕುತಂತ್ರ. ಎರಡೂ ಪಕ್ಷಗಳ ನಾಯಕರು ಸೇರಿಕೊಂಡು ಪ್ರಜಾತಂತ್ರ ವ್ಯವಸ್ಥೆಗೆ ದ್ರೋಹ ಮಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲ ಅಭ್ಯರ್ಥಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಯಾವ ಆಮಿಷ ಒಡ್ಡಿದ್ದಾರೆ ಎಂದು ಗೊತ್ತಿಲ್ಲ ಎಂದು ಜೆಡಿಎಸ್, ಕಾಂಗ್ರೆಸ್ ಮುಖಂಡರ ವಿರುದ್ಧ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

ಪಕ್ಷ ಇಟ್ಟ ನಂಬಿಕೆಗೆ ದ್ರೋಹ ಬಗೆದು ಅಭ್ಯರ್ಥಿ ಕಣದಿಂದ ಹಿಂದೆ ಸರಿದರೂ ಅಲ್ಲಿನ ಮುಖಂಡರು, ಕಾರ್ಯಕರ್ತರು ಆ ಅಭ್ಯರ್ಥಿಗೇ ಮತ ಹಾಕಿಸಬೇಕು.ಪಲಾಯನ ಮಾಡಿದ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು. ಹಾಗೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಬೇಕು ಎಂದು ಕೋರಿದರು.

ADVERTISEMENT

ಅವರ ತಂದೆ ಕಾಂಗ್ರೆಸ್‌ನಲ್ಲೇ ಇದ್ದರೂ,ಮಗನ ನಿರ್ಧಾರ ಅವರೂ ಖಂಡಿಸಿದ್ದಾರೆ. ಧೈರ್ಯವಾಗಿ ಚುನಾವಣೆ ಎದುರಿಸಿದ್ದರೆ ಗೆಲ್ಲುವ ಸಾಧ್ಯತೆ ಇತ್ತು. ನಮ್ಮ ನಾಯಕರು ಅಲ್ಲಿ ಪ್ರಚಾರ ಮಾಡಿದ್ದರು.ಕೇಂದ್ರ ಸಚಿವ ಸದಾನಂದ ಗೌಡರು ಅಲ್ಲಿನ ಜವಾಬ್ದಾರಿ ವಹಿಸಿಕೊಂಡಿದ್ದರು ಎಂದರು.

ಬಿಜೆಪಿ ಅಭ್ಯರ್ಥಿ ಮಾಡಿದ ಆರೋಪ ಸುಳ್ಳು. ಘಟನೆಯಿಂದ ಬಿಜೆಪಿಯೂ ಪಾಠ ಕಲಿತಿದೆ.ರಾಮನಗರದ ಹಿನ್ನಡೆಉಳಿದ ನಾಲ್ಕು ಕ್ಷೇತ್ರಗಳ ಮೇಲೆಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್ ಮಾತನಾಡಿ, ಶಿರಾಳಕೊಪ್ಪದ ಅಂಗಡಿಯಲ್ಲಿ ಒಂದೇ ದಿನ 2 ಸಾವಿರ ಬಾಕ್ಸ್ ಮದ್ಯ ಮಾರಾಟವಾಗಿದೆ. ಇದು ಹೇಗೆ ಸಾಧ್ಯ. ಈ ಕುರಿತು ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.