ADVERTISEMENT

ಮೆಕ್ಕೆಜೋಳ ಸಂಶೋಧನಾ ಕೇಂದ್ರಕ್ಕೆ ₹5 ಕೋಟಿ ನೆರವು ಕೊಡಿ: ಬಿ.ವೈ. ರಾಘವೇಂದ್ರ ಮನವಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 15:34 IST
Last Updated 10 ಆಗಸ್ಟ್ 2023, 15:34 IST
ದೆಹಲಿಯಲ್ಲಿ ಗುರುವಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಭೇಟಿ ಮಾಡಿ ಚರ್ಚಿಸಿದರು
ದೆಹಲಿಯಲ್ಲಿ ಗುರುವಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಭೇಟಿ ಮಾಡಿ ಚರ್ಚಿಸಿದರು   

ಶಿವಮೊಗ್ಗ: ಶಿವಮೊಗ್ಗದಲ್ಲಿ ಮೆಕ್ಕೆಜೋಳದ ಸಂಶೋಧನಾ ಕೇಂದ್ರ ಸ್ಥಾಪಿಸಲು ₹ 5 ಕೋಟಿ ಅಗತ್ಯವಿದ್ದು, ಆರ್ಥಿಕ ನೆರವು ಮಂಜೂರು ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ದೆಹಲಿಯಲ್ಲಿ ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.

ಮೆಕ್ಕೆಜೋಳ ಬೆಳೆ ಪ್ರದೇಶ ರಾಜ್ಯದಲ್ಲಿ ಹೆಚ್ಚುತ್ತಿದ್ದರೂ, ಇಳುವರಿ ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ. ಶಿವಮೊಗ್ಗ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಪ್ರಧಾನ ಬೆಳೆಯಾಗಿದೆ. ಹೀಗಾಗಿ ಇಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವುದು ಸೂಕ್ತ ಎಂದು ಕೋರಿದರು.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಮೆಕ್ಕೆಜೋಳ ಸಂಶೋಧನಾ ಕೇಂದ್ರಕ್ಕೆ ನಡೆಸಿದ ಸ್ಥಳ ಪರಿಶೀಲನೆ ಬಳಿಕ,  ಶಿವಮೊಗ್ಗದಲ್ಲಿ  ಐಸಿಎಆರ್- ಐಐಎಂಆರ್‌ನ ಪ್ರಾದೇಶಿಕ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಸ್ಥಾಪಿಸಲು ಶಿಫಾರಸು ಮಾಡಿದೆ.

ADVERTISEMENT

ಸಂಶೋಧನಾ ಕೇಂದ್ರಕ್ಕೆ ಪೂರಕವಾದ ಎಲ್ಲಾ ಅಂಶಗಳು ಶಿವಮೊಗ್ಗದಲ್ಲಿ ಇರುವುದನ್ನು ಪರಿಗಣಿಸಿ ಸ್ಥಳ ಆಯ್ಕೆ ಸಮಿತಿಯು ಶಿವಮೊಗ್ಗಕ್ಕೆ ಈ ಕೇಂದ್ರ ಶಿಫಾರಸು ಮಾಡಿದೆ. ಅದರಂತೆ, ಮುಂದಿನ ಕ್ರಮಕ್ಕಾಗಿ ಎಸ್‌ಎಸ್‌ಸಿ ವರದಿಯನ್ನು ಐಸಿಎಆರ್‌ಗೆ ಸಲ್ಲಿಸಲಾಗಿದೆ ಎಂಬ ಸಂಗತಿಯನ್ನು ಸಚಿವರಿಗೆ ಮನವರಿಕೆ ಮಾಡಿದರು. 

ದೇಶದಲ್ಲಿ ಇಂಧನ ಬೇಡಿಕೆ ಸರಿದೂಗಿಸಲು ಪೆಟ್ರೋಲ್‌ನೊಂದಿಗೆ ಎಥೆನಾಲ್‌ನ ಶೇ 20 ಮಿಶ್ರಣ ಸಾಧ್ಯವಾಗಿಸಲು ಮೆಕ್ಕೆಜೋಳ ಉತ್ಪಾದನೆ ಹೆಚ್ಚಿಸುವುದು ಅತ್ಯಗತ್ಯ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.