ADVERTISEMENT

‘ಬಂಗಾರ’ದ ಹಾದಿಯ ವೀಕ್ಷಣೆಗೆ ಡಿಜಿಟಲ್ ವ್ಯವಸ್ಥೆ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ 14ನೇ ಪುಣ್ಯಸ್ಮರಣೆ; ಸಚಿವ ಮಧು ಬಂಗಾರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:56 IST
Last Updated 27 ಡಿಸೆಂಬರ್ 2025, 3:56 IST
ಶಿವಮೊಗ್ಗ–ಸೊರಬ–ಬನವಾಸಿ–ಶಿರಸಿ ನಡುವೆ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಎರಡು ಸಾರಿಗೆ ಸಂಸ್ಥೆ ಬಸ್ ಗಳಿಗೆ ಮಧು ಬಂಗಾರಪ್ಪ ಚಾಲನೆ ನೀಡಿದರು
ಶಿವಮೊಗ್ಗ–ಸೊರಬ–ಬನವಾಸಿ–ಶಿರಸಿ ನಡುವೆ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಎರಡು ಸಾರಿಗೆ ಸಂಸ್ಥೆ ಬಸ್ ಗಳಿಗೆ ಮಧು ಬಂಗಾರಪ್ಪ ಚಾಲನೆ ನೀಡಿದರು   

ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಜೀವನಗಾಥೆ, ರಾಜಕೀಯ ಬದುಕಿನ ಹಾದಿ ಹಾಗೂ ಮುಖ್ಯಮಂತ್ರಿ ಆಗಿ ಅವರ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರದ ಡಿಜಿಟಲ್ ರೂಪವನ್ನು ಶೀಘ್ರದಲ್ಲೇ ಇಲ್ಲಿನ ಬಂಗಾರಧಾಮದಲ್ಲಿ ಅಳವಡಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಬಂಗಾರಪ್ಪ ಹಾಗೂ ಶಕುಂತಲಾ ದಂಪತಿಯ ಸಮಾಧಿ ಸ್ಥಳವಾದ ‘ಬಂಗಾರಧಾಮ’ದಲ್ಲಿ ಶುಕ್ರವಾರ ಬಂಗಾರಪ್ಪ ಅವರ 14ನೇ ವರ್ಷದ ಪುಣ್ಯತಿಥಿಯ ಪೂಜಾ ಕಾರ್ಯ ನೆರವೇರಿಸಿ ಮಾತನಾಡಿದರು.

ಸೊರಬದ ಬಂಗಾರಧಾಮಕ್ಕೆ ರಾಜ್ಯ ಸರ್ಕಾರ ಈಗ ಪ್ರವಾಸಿ ಕೇಂದ್ರದ ಸ್ಥಾನಮಾನ ನೀಡಿದೆ. ಹೀಗಾಗಿ ಇಲ್ಲಿಗೆ ನಾಡಿನ ಎಲ್ಲ ಭಾಗದಿಂದಲೂ ಬಂಗಾರಪ್ಪ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಬಂಗಾರಪ್ಪ ಅವರು ಆರಂಭಿಸಿದ ಆಶ್ರಯ, ಅಕ್ಷಯ, ಆರಾಧನಾ, ವಿಶ್ವ ಯೋಜನೆಗಳಿಂದ ಬದುಕು ಕಟ್ಟಿಕೊಂಡವರು, ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪಡೆದ ರೈತಾಪಿ ವರ್ಗದವರು ಅಭಿಮಾನದಿಂದ ಬಂಗಾರಪ್ಪ ಅವರ ಸಮಾಧಿ ಸ್ಥಳ ವೀಕ್ಷಣೆಗೆ ಬರುತ್ತಿದ್ದಾರೆ. ಇಲ್ಲಿ ಡಿಜಿಟಲ್ ಸಾಕ್ಷ್ಯಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿದರೆ ಬಂಗಾರಪ್ಪ ಅವರ ಬದುಕಿನ ಹಾದಿ ಅವರಿಗೆ ಮನದಟ್ಟಾಗುತ್ತದೆ. ಪ್ರವಾಸಿ ನೆಲೆಯಾಗಿಯೂ ಇದಕ್ಕೆ ಇನ್ನಷ್ಟು ಮೆರುಗು ಬರಲಿದೆ ಎಂದರು.

ADVERTISEMENT

ಬಂಗಾರಪ್ಪ ಬರೀ ವ್ಯಕ್ತಿಯಲ್ಲ. ಅವರು ನಾಡಿನ ಎಲ್ಲ ಸಮುದಾಯಗಳ ಬಡವರಿಗೆ ಶಕ್ತಿ ತುಂಬಿದ್ದ ಜನನಾಯಕ. ವ್ಯಕ್ತಿಯಾಗಿ ಅವರು ಇಲ್ಲದಿದ್ದರೂ ಚಿಂತನೆಗಳ ಮೂಲಕ ಜನಮಾನಸದಲ್ಲಿ ಸದಾ ಜೀವಂತವಾಗಿರಲಿದ್ದಾರೆ. ಅವರ ವಿಚಾರಗಳು ಇಂದಿಗೂ ಪ್ರಸ್ತುತ. ಹೀಗಾಗಿಯೇ ಬಂಗಾರಧಾಮ ಶೋಷಿತರು ಹಾಗೂ ಬಡವರ ಚೈತ್ರಭೂಮಿಯಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.

ಮಧು ಬಂಗಾರಪ್ಪ ಪತ್ನಿ ಅನಿತಾ, ಪುತ್ರ ಸೂರ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರೊಂದಿಗೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಬಂಗಾರಧಾಮಕ್ಕೆ ಮುಂಜಾನೆಯೇ ಸೊರಬ ಕ್ಷೇತ್ರ ಮಾತ್ರವಲ್ಲದೆ ಕಲಬುರಗಿ, ಬೆಂಗಳೂರು, ಶಿವಮೊಗ್ಗ, ಸಾಗರದಿಂದಲೂ ಬಂದಿದ್ದ ಬಂಗಾರಪ್ಪ ಕುಟುಂಬದ ಬೆಂಬಲಿಗರು ಸಮಾಧಿ ಸ್ಥಳಕ್ಕೆ ಹೂ ಅರ್ಪಿಸಿ ಗೌರವ ಸಲ್ಲಿಸಿದರು. ಬಂಗಾರಧಾಮದ ಆವರಣದಲ್ಲಿ ಅಡ್ಡಾಡಿ ಅಲ್ಲಿನ ಕಟ್ಟೆಯ ಮೇಲೆ ಕೂತು ಬಂಗಾರಪ್ಪ ಅವರ ಕಾಲದ ನೆನಪುಗಳೊಂದಿಗೆ ಸಂವಾದಿಯಾದರು. ಎಲ್ಲರಿಗೂ ಅಲ್ಲಿಯೇ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಶಹನಾಯ್ ವಾದನದ ನಮನ ಕೂಡ ನಡೆಯಿತು.

ಈ ವೇಳೆ ಬಗರ್ ಹುಕುಂ ಅಧ್ಯಕ್ಷ ಎಂ.ಡಿ. ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ ಅಂಕರವಳ್ಳಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಘಟಕದ ಅಧ್ಯಕ್ಷ ಸದಾನಂದಗೌಡ, ಮುಖಂಡರಾದ ಗಣಪತಿ ಹುಲ್ತಿಕೊಪ್ಪ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಗೌಡ, ಮುಖಂಡ ತಬಲಿ ಬಂಗಾರಪ್ಪ, ಮಂಜುನಾಥ್ ಹಳೇಸೊರಬ, ಕೆ.ಪಿ.ಗೌಡ, ನಾಗರಾಜ್ ಚಿಕ್ಕಸವಿ, ನೆಹರೂ ಕೊಡಕಣಿ, ಬಸವೇಶ್ವರ, ಪ್ರಭು ಶಿಗ್ಗಾ, ಶ್ರೀಕಾಂತ್ ಚಿಕ್ಕಶಕುನ, ಮಹಮದ್ ಸಾಜಿದ್, ಅತಿಕ್, ಜಿ.ಪಂ ಮಾಜಿ ಸದಸ್ಯ ಶಿವಲಿಂಗೇಗೌಡ ಸೇರಿದಂತೆ ಬಂಗಾರಪ್ಪ ಅಭಿಮಾನಿಗಳು ‌ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದರು.

ಬಸ್ ಸಂಚಾರಕ್ಕೆ ಮಧು ಚಾಲನೆ

ಶಿವಮೊಗ್ಗ–ಸೊರಬ–ಬನವಾಸಿ–ಶಿರಸಿ ನಡುವೆ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಎರಡು ಸಾರಿಗೆ ಸಂಸ್ಥೆ ಬಸ್‌ಗಳಿಗೆ ಮಧು ಬಂಗಾರಪ್ಪ ಚಾಲನೆ ನೀಡಿದರು. ಗ್ರಾಮೀಣರ ಬೇಡಿಕೆ ಮೇರೆಗೆ ಸೊರಬ ಕ್ಷೇತ್ರಕ್ಕೆ ಶೀಘ್ರವೇ  15 ಸಾರಿಗೆ ಸಂಸ್ಥೆ ಬಸ್‌ಗಳನ್ನು ಬಿಡಲಾಗುವುದು ಎಂದರು.

ಜನವರಿ ಅಂತ್ಯದ ವೇಳೆಗೆ ರಾಜ್ಯದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹೀಗಾಗಿ ಸೊರಬ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆ ಮಾಡಿರುವ ₹ 50 ಕೋಟಿಯಲ್ಲಿ ₹ 45 ಕೋಟಿಯನ್ನು ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದ್ದು ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂದರು.

ನಮ್ಮ ವಿರೋಧದ ನಡುವೆಯೂ ವಸತಿ ಯೋಜನೆಗೆ 100 ಎಕರೆ ಭೂಮಿ ವಶಪಡಿಸಿಕೊಂಡಾಗ ಬಂಗಾರಪ್ಪ ಅವರು ನಮ್ಮ ಊರಿಗೆ ಬಂದು ಅಳಲು ಆಲಿಸಿ ನಮ್ಮೊಂದಿಗೆ ರಾಗಿ ರೊಟ್ಟಿ ತಿಂದು ಸರ್ಕಾರದೊಂದಿಗೆ ಮಾತಾಡಿ ನಮ್ಮ ಜಮೀನು ಉಳಿಸಿದ್ದರು.
ನಾರಾಯಣಪ್ಪ ಕುಗ್ವೆ
ನನಗೆ ಬಂಗಾರಪ್ಪ ಅವರೇ ಪಕ್ಷ. ಅವರು ಎಲ್ಲಿಗೆ ಹೋಗುತ್ತಿದ್ದರೋ ಅಲ್ಲಿಗೆ ನಾನೂ ಹೋಗುತ್ತಿದ್ದೆ. ಕಷ್ಟ–ಸುಖ ಆಲಿಸಿ ನಮ್ಮನ್ನು ಬೆಳೆಸಿದ್ದಾರೆ. ತಾಳಗುಪ್ಪಕ್ಕೆ ಬಂದಾಗ ನಮ್ಮ ಮನೆಗೆ ಬಂದು ಏಡಿ ಮೀನಿನ ಊಟ ಮಾಡಿದ್ದರು ಅದು ಸ್ಮರಣೀಯ.
ಲೋಕೇಶ್ ಗಾಳಿಪುರ
ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಬಂಗಾರಪ್ಪ ಅವರ 14ನೇ ವರ್ಷದ ಪುಣ್ಯತಿಥಿಯ ಪೂಜಾ ಕಾರ್ಯದಲ್ಲಿ ಸಚಿವ ಮಧು ಬಂಗಾರಪ್ಪ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.