ADVERTISEMENT

ಸೊರಬ | ಎಸ್.ಬಂಗಾರಪ್ಪ ಜನ್ಮದಿನ ಆಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ ನಾಳೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
ಸೊರಬದ ಬಂಗಾರಧಾಮದ ನೋಟ
ಸೊರಬದ ಬಂಗಾರಧಾಮದ ನೋಟ   

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನ ಆಚರಣೆ ಸಮಾರಂಭ ಅ. 26ರಂದು ಜಿಲ್ಲೆಯ ಸೊರಬದಲ್ಲಿರುವ ‘ಬಂಗಾರಧಾಮ’ದಲ್ಲಿ ನಡೆಯಲಿದೆ.

‘ಎಸ್‌.ಬಂಗಾರಪ್ಪ– ಶಕುಂತಲಾ ದಂಪತಿಯ ಸಮಾಧಿ ಸ್ಥಳವಾದ ‘ಬಂಗಾರಧಾಮ’ ಸಚಿವ ಮಧು ಎಸ್.ಬಂಗಾರಪ್ಪ ಅವರ ಕನಸಿನಂತೆ ಆಕರ್ಷಕವಾಗಿ ವಿನ್ಯಾಸಗೊಂಡಿದೆ. ರಾಜ್ಯ ಸರ್ಕಾರ ಅದನ್ನು ಪ್ರವಾಸಿ ಸ್ಥಳ ಎಂದು ಗುರುತಿಸಿದೆ. ಹೀಗಾಗಿ ಈ ಬಾರಿ ಬಂಗಾರಪ್ಪ ಅವರ ಹುಟ್ಟುಹಬ್ಬದ ಸಂಭ್ರಮ ಇಮ್ಮಡಿಸಿದೆ’ ಎಂದು ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯಕ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮಾರಂಭದಲ್ಲಿ ‘ಬಂಗಾರ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬೆಂಗಳೂರಿನ ಧರ್ಮಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ, ಸಾಹಿತಿ ಕಾಳೇಗೌಡ ನಾಗವಾರ, ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ ಹಾಗೂ ರಂಗ ಕಲಾವಿದ ಜೇವರ್ಗಿ ರಾಜಣ್ಣ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಚಿವರಾದ ಕೆ.ಎಚ್‌.ಮುನಿಯಪ್ಪ, ಆರ್‌.ವಿ.ದೇಶಪಾಂಡೆ, ಸಂತೋಷ್‌ ಲಾಡ್‌ ಪ್ರದಾನ ಮಾಡಲಿದ್ದಾರೆ ಎಂದು ವಿವರಿಸಿದರು.

ADVERTISEMENT

ಶಾಸಕ ಬೇಳೂರು ಗೋಪಾಲಕೃಷ್ಣ, ದಿ ಪ್ರಿಂಟರ್ಸ್ ಮೈಸೂರು ಲಿಮಿಟೆಡ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್‌ಕುಮಾರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಪಾಲ್ಗೊಳ್ಳುವರು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಎಸ್.ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಬಂಗಾರಪ್ಪನವರ ಚಿಂತನೆಗಳು ಕುರಿತು ವಿಚಾರ ಸಂಕಿರಣ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಕೂಡ ಗರಿಗೆದರಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.