ADVERTISEMENT

ಗುರು–ಶಿಷ್ಯರ ಸಂಬಂಧ ಹಾಳು ಮಾಡುವ ಎನ್‌ಇಪಿ: ಬರಗೂರು ರಾಮಚಂದ್ರಪ್ಪ

ಡಾ.ಬಿ. ಗಣಪತಿ ಅವರಿಗೆ ನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:08 IST
Last Updated 17 ಮೇ 2022, 4:08 IST
ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಗಣಪತಿ ಉತ್ತುಂಗ ಗೌರವ ಗ್ರಂಥವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು.
ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಗಣಪತಿ ಉತ್ತುಂಗ ಗೌರವ ಗ್ರಂಥವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು.   

ತೀರ್ಥಹಳ್ಳಿ: ದೇಶದಲ್ಲಿ ಲಕ್ಷಾಂತರ ಶಿಕ್ಷಕರ ಹುದ್ದೆ ಖಾಲಿಯಿದೆ. ಗುರು–ಶಿಷ್ಯರ ಸಂಬಂಧ ಹಾಳು ಮಾಡುವ ಶಿಕ್ಷಣ ನೀತಿಯಂತೆ ಎನ್‌ಇಪಿ ಭಾಸವಾಗುತ್ತಿದೆ. ಬಡವರು, ಹೆಣ್ಣುಮಕ್ಕಳು, ದಲಿತರು, ದುರ್ಬಲ ಸಮುದಾಯದವರು ಶಿಕ್ಷಣದಿಂದ ವಿಮುಖರಾಗುವಂತೆ ಶಿಕ್ಷಣೋದ್ಯಮೀಕರಣವಾಗುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ತುಂಗಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಾ.ಬಿ. ಗಣಪತಿ ಅವರ ಶಿಷ್ಯ ವೃಂದ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶಿಷ್ಯ ಸಂಭ್ರಮ, ನಮನ, ಭಾವಾಭಿನಂದನೆ ಕಾರ್ಯಕ್ರಮದಲ್ಲಿ ಗಣಪತಿ ಉತ್ತುಂಗ ಗೌರವ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ, ಚರಿತ್ರೆ ಅಧ್ಯಯನದಿಂದ ಶಿಕ್ಷಣ ಜ್ಞಾನಮುಖಿಯಾಗಿ ವಿಸ್ತರಣೆ ಪಡೆದುಕೊಳ್ಳಬೇಕು. ಆದರೆ, ಉದ್ಯೋಗದ ಮಾರ್ಗ ಹಿಡಿಯುತ್ತಿರುವುದು ಮಾನವನ ವಿವೇಕ, ಔಚಿತ್ಯವನ್ನು ದೂರ ಮಾಡುವಂತೆ ಮಾಡಿದೆ ಎಂದು ಹೇಳಿದರು.

ADVERTISEMENT

ಜ್ಞಾನದ ಸಂಕೇತವಾದ ಶಿಕ್ಷಕನಲ್ಲಿ ತಾಯ್ತನ ಇರಬೇಕು. ಬುದ್ಧನೊಳಗೆ ಇರುವ ಶಾಂತಿ, ಮೌನ, ಜ್ಞಾನ ಗುರುವಿನ ಪ್ರತೀಕ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿ ಸುಳ್ಳಿಗೆ ಸಾಕ್ಷಿ ನೀಡದಿದ್ದರೂ ಪರವಾಗಿಲ್ಲ ಎಂಬ ಸಮಾಜ ದೇಶದಲ್ಲಿ ನಿರ್ಮಾಣವಾಗಿದೆ. ಅಂತಹ ಸಮಾಜವನ್ನು ಜ್ಞಾನದೆಡೆಗೆ ಕೊಂಡೊಯ್ಯುವ ಮೇಷ್ಟ್ರು ಡಾ.ಬಿ.ಗಣಪತಿ. ಸಾಹಿತಿಗಳಾದವರು ಸತ್ಯ ಹೇಳುವ ಮಧ್ಯವರ್ತಿಯಾಗಬೇಕು ಎಂದು ಹೇಳಿದರು.

ಮಾನವ ಹಕ್ಕುಗಳ ಹೋರಾಟಗಾರ್ತಿ, ಕವಿಯಿತ್ರಿ ಚಾಂದಿನಿ, ಪ್ರಾಧ್ಯಾಪಕ ಡಾ.ಬಿ.ಎಂ. ಪುಟ್ಟಯ್ಯ ಮಾತನಾಡಿದರು. ಹಂಪಿ ಕನ್ನಡ ವಿ.ವಿ ಕುಲಪತಿ ಡಾ.ಸ.ಚಿ. ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು.
ನಿವೃತ್ತ ಉಪನ್ಯಾಸಕ ಡಾ.ಬಿ. ಗಣಪತಿ ಶಿಷ್ಯ ವೃಂದದ ಅಭಿನಂದನೆ ಸ್ವೀಕರಿಸಿದರು.

ಡಾ.ಬಿ.ಎಸ್.‌ ನಾಗೇಶ ಬಿದರಗೋಡು, ಸತೀಶ್‌ ಜಿ.ಕೆ., ಹಕೀಮ್‌ ಕ್ಯಾದಿಗ್ಗೆರೆ, ವಿ.ಎಸ್.‌ ಸುಬ್ರಮಣ್ಯ ವಾರಳಿ, ಆದರ್ಶ ಕುರುವಳ್ಳಿ, ಕೆ.ಎಲ್.‌ ಪ್ರಸನ್ನ, ನಿಶ್ಚಲ್‌ ಜಾದೂಗಾರ್‌ ಕಾರ್ಯಕ್ರಮ ನಿರ್ವಹಿಸಿದರು.

ಕೋಟ್‌...

ಹೊಸತನ ಆಲೋಚಿಸುವ ಕ್ರಮ ದೊಡ್ಡದು. ಭಾರತದಂತಹ ದೇಶದಲ್ಲಿ ಟೋಪಿ, ಗಡ್ಡ, ಜುಟ್ಟು ತೆಗೆಯುವುದು ಕಷ್ಟ. ಈಗಾಗಲೇ ವ್ಯವಸ್ಥಿತವಾಗಿ ಬೇರೂರಿರುವ ವೇದಿಕೆ, ನಿರ್ವಹಣೆ ತಂತ್ರಗಾರಿಕೆ ಪ್ರಸ್ತುತವಾಗಿ ಗೋಚರಿಸುತ್ತದೆ. ಆವಿಷ್ಕಾರ ಇಲ್ಲದ ಬದಲಾವಣೆ ವ್ಯರ್ಥ.

ಡಾ.ಬಿ. ಗಣಪತಿ, ನಿವೃತ್ತ ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.