
ಸೊರಬ: ಡಿ.ಜೆ, ಪಾಶ್ವಾತ್ಯ ಸಂಗೀತಗಳ ಅಬ್ಬರ ಮತ್ತು ಪ್ರೇಕ್ಷಕರ ನಿರಾಸಕ್ತಿಯಿಂದಾಗಿ ಅಳಿವಿನಂಚನ್ನು ತಲುಪಿರುವ ಹವ್ಯಾಸಿ ಕಲೆಯಾದ ಬಯಲಾಟಕ್ಕೆ ತಾಲ್ಲೂಕಿನಲ್ಲಿ ಮತ್ತೆ ಮರು ಜೀವ ನೀಡಲು ಸಿದ್ಧತೆ ನಡೆಸಲಾಗಿದೆ.
ತಾಲ್ಲೂಕಿನ ಅದೆಷ್ಟೋ ಬಯಲಾಟ (ದೊಡ್ಡಾಟ)ದ ಕಲಾವಿದರು ಸೂಕ್ತ ವೇದಿಕೆಯಿಲ್ಲದೆ ಕಲೆಯನ್ನೇ ಮರೆಯುಂತಾಗಿದೆ. ಭಾಗವತಿಕೆ, ವೇಷಧಾರಿ ಹಾಗೂ ಮೃದಂಗದ ಕಲಾವಿದರಿಗೆ ವೇದಿಕೆಗಳ ಕೊರತೆಯಿಂದ ಬಯಲಾಟ ಅಳಿವಿನಂಚಿನಲ್ಲಿದೆ. ಹಳ್ಳಿಗರೇ ತರಬೇತಿ ಪಡೆದು ಪ್ರದರ್ಶನ ನೀಡುವ, ಗ್ರಾಮೀಣ ಭಾಗದಲ್ಲಿ ಮನರಂಜನೆಗೆಂದೇ ಮೀಸಲಾಗಿದ್ದ ಬಯಲಾಟ ದೂರವಾಗುತ್ತಿದೆ. ಈ ನಿಟ್ಟಿನಲ್ಲಿ ಬಯಲಾಟ ಕಲೆಯನ್ನು ಉಳಿಸಲು ಚಂದ್ರಗುತ್ತಿ ಭಾಗದ ರಂಗನಾಥ ಹವ್ಯಾಸಿ ಬಯಲಾಟ ಕಲಾ ಬಳಗ ದಿಟ್ಟ ಹೆಜ್ಜೆ ಇಟ್ಟಿದೆ.
ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡು ಕಲೆ. ಇದು ಸಾಹಿತ್ಯ, ಸಂಗೀತ, ನೃತ್ಯವನ್ನು ಒಳಗೊಂಡಿದ್ದು, ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಅಳಿವಿನಂಚಿನ ಈ ಕಲೆಯ ಬಗ್ಗೆ ತರಬೇತಿ ನೀಡಲು ಕಲಾ ಬಳಗ ಮುಂದಾಗಿದೆ.
ಡಿ.20ರಿಂದ ಪ್ರಾರಂಭವಾಗುವ ಕಾರ್ಯಗಾರದಲ್ಲಿ 100ಕ್ಕೂ ಅಧಿಕ ಸಂಖ್ಯೆಯ ಆಸಕ್ತರಿಗೆ ತರಬೇತಿ ನೀಡಿ ಪ್ರದರ್ಶನ ನೀಡುವ ಕಾರ್ಯಕ್ಕೆ ಮುಂದಾಗಿದೆ.
‘ತಾಲ್ಲೂಕಿನ ಚಂದ್ರಗುತ್ತಿ, ಚನ್ನಪಟ್ಟಣ, ಕುಮ್ಮೂರು, ಹರೂರು, ಯಲವಳ್ಳಿ, ಹೊಳೆಮರೂರು ಹಾಗೂ ನ್ಯಾರ್ಸಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ತಮ್ಮ ಪೂರ್ವಜರ ಕಾಲದಿಂದಲೂ ಭಾಗವತಿಕೆ ಹಾಗೂ ವೇಷ ಧರಿಸುವ ಕಲಾವಿದರಿದ್ದಾರೆ. ಬಯಲಾಟದ ಪ್ರದರ್ಶನದಲ್ಲಿ ಬಹಳಷ್ಟು ಪರಿಶ್ರಮವಿದೆ. ಹಲವು ತಿಂಗಳುಗಳ ಕಾಲ ತಾಲೀಮು ನಡೆಸಿ ಪ್ರದರ್ಶನ ನಡೆಸುವಲ್ಲಿ ಭಾಗವತರ ಪಾತ್ರ ಅತಿ ಮುಖ್ಯ. ಬಯಲಾಟ ಕಲೆ ಅಳಿವಿನಂಚಿನಲ್ಲಿದ್ದು, ಯುವ ಸಮೂಹದಲ್ಲಿ ಈ ಬಗ್ಗೆ ಆಸಕ್ತಿ ಬೆಳೆಸಬೇಕಿದೆ’ ಎನ್ನುತ್ತಾರೆ ಬಳಗದ ಸದಸ್ಯ ಹಾಗೂ ಕಲಾವಿದ ಪ್ರಜ್ವಲ್ ಚಂದ್ರಗುತ್ತಿ.
ಪ್ರಸ್ತುತ ಬಯಲಾಟ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಪ್ರಮುಖ ಜನಪದ ಕಲೆ. ರಂಗಭೂಮಿಯ ಮೂಲ ಪ್ರಕಾರ. ರಾಜ್ಯದ ಬಹುತೇಕ ಜಿಲ್ಲೆ ಸೇರಿದಂತೆ ತಾಲ್ಲೂಕಿನಲ್ಲಿ ಮನೆ ಮಾತಾಗಿರುವ ಬಯಲಾಟವು ಜನರು ಸನ್ಮಾರ್ಗದಲ್ಲಿ ಸಾಗಬೇಕೆನ್ನುವ ಉದ್ದೇಶವನ್ನು ಸಾರುತ್ತದೆ. ಬಯಲಾಟದ ಕಥಾ ಪ್ರಸಂಗ, ಭಾಗವಂತಿಕೆ, ಹಿಮ್ಮೇಳ, ಪಾತ್ರದಾರಿಯ ವೇಷ ಭೂಷಣ, ಕುಣಿತ ಮೊದಲಾದ ಸಂಗತಿಗಳನ್ನೊಳಗೊಂಡ ಕಥಾ ಪ್ರಕಾರವಾಗಿದೆ.
ಇತ್ತೀಚೆಗೆ ವಿದ್ಯುನ್ಮಾನ ಮಾಧ್ಯಮಗಳು, ಡಿ.ಜೆ ಹಾವಳಿಯಿಂದ ಈ ಕಲೆಗೆ ಒಂದಷ್ಟು ಹಿನ್ನಡೆಯಾಗಿದೆ. ಹಾಗಾಗಿ ಕಲೆಯನ್ನು ಉಳಿಸಿ ಬೆಳೆಸುವತ್ತ ರಂಗನಾಥ ಹವ್ಯಾಸಿ ಬಯಲಾಟ ಕಲಾ ಬಳಗ ಆಸಕ್ತರಿಗೆ ತರಬೇತಿ ನೀಡಿ ಪ್ರದರ್ಶನ ನಡೆಸುವ ಚಿಂತನೆ ನಡೆಸಲಾಗಿದೆ ಎಂಬುದು ಭಾಗವತ ಪ್ರಕಾಶ್ ನಾಯ್ಕ ಚನ್ನಪ್ಪಟ್ಟಣ ಅವರ ಅಭಿಪ್ರಾಯ
40 ವರ್ಷಗಳಿಂದ ತಂದೆ ರಂಗಪ್ಪ ಮೂಲೇರಮನೆ ಭಾಗವತಿಕೆ ಹಾಗೂ ಕುಳಗದ ಹನುಂಮತಪ್ಪ ಮೃದಂಗದ ಮೂಲಕ ದೊಡ್ಡಾಟ ನಡೆಸುತ್ತಿದ್ದರು. ಅವರ ಮರಣದ ನಂತರ ಭಾಗವತಿಕೆ ನಡೆಸಿ ಹಲವು ಗ್ರಾಮಗಳಲ್ಲಿ ತರಬೇತಿ ನೀಡಿ ಪ್ರದರ್ಶನ ನೀಡಲಾಗಿದೆ. ಯುವ ಸಮೂಹಕ್ಕೆ ಬಯಲಾಟದ ಕುರಿತು ಅರಿವು ಮೂಡಿಸಬೇಕಿದೆ.–ಶಂಕರಣ್ಣ ಮೂಲೇರಮನೆ, ಬಯಲಾಟದ ಭಾಗವತರು
ಕಲಾವಿದರಿಗೆ ವಯಸ್ಸಾಗುತ್ತಿದೆ. ಆದರೆ ಕಲೆ ನಿತ್ಯ ಹರಿಯುವ ನೀರಾಗಬೇಕು. ಆದ್ದರಿಂದ ಯುವಕರಿಗೆ ತರಬೇತಿ ನೀಡುವ ಮೂಲಕ ಮೂಲ ಕಲೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ.–ಮಂಜಪ್ಪ ರಂಗನಾಥ, ಹವ್ಯಾಸಿ ಬಯಲಾಟ ಕಲಾ ಬಳಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.