ADVERTISEMENT

ಬೀಸನಗದ್ದೆ: ಸಂಚಾರಕ್ಕೆ ದೋಣಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 3:43 IST
Last Updated 13 ಜುಲೈ 2022, 3:43 IST
ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮ ಜಲಾವೃತಗೊಂಡ ಕಾರಣ ತಾಲ್ಲೂಕು ಆಡಳಿತ ಗ್ರಾಮಸ್ಥರ ಸಂಚಾರಕ್ಕಾಗಿ ದೋಣಿ ವ್ಯವಸ್ಥೆ ಮಾಡಿದೆ.
ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮ ಜಲಾವೃತಗೊಂಡ ಕಾರಣ ತಾಲ್ಲೂಕು ಆಡಳಿತ ಗ್ರಾಮಸ್ಥರ ಸಂಚಾರಕ್ಕಾಗಿ ದೋಣಿ ವ್ಯವಸ್ಥೆ ಮಾಡಿದೆ.   

ಸಾಗರ: ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮ ಹದಿನೈದು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ. ಬೀಸನಗದ್ದೆ ಗ್ರಾಮಕ್ಕೆ ತಾತ್ಕಾಲಿಕವಾಗಿ ದೋಣಿ ಸಂಪರ್ಕ ಕಲ್ಪಿಸಲಾಗಿದೆ.

ಗ್ರಾಮದ ಸುಮಾರು 28 ಮನೆಗಳು ಜಲದಿಗ್ಬಂಧನಕ್ಕೆ ಒಳಪಟ್ಟಿವೆ. ಗ್ರಾಮದ ಜನರ ಸಂಚಾರಕ್ಕಾಗಿ ಮಂಗಳವಾರ ಬೆಳಿಗ್ಗೆ ತೆಪ್ಪದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಎಂಜಿನ್ ಬೋಟ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಜನರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ.

ತಾಳಗುಪ್ಪ ಹೋಬಳಿ ವ್ಯಾಪ್ತಿಯ ಬೀಸನಗದ್ದೆ, ತಡಗಳಲೆ, ಸೈದೂರು, ಕೆ.ಜಿ.ಕೊಪ್ಪ, ಹಾರೆಗೊಪ್ಪ, ಅತ್ತಿಸಾಲು, ಕಣಸೆ, ಮಂಡಗಳಲೆ ಸೇರಿ ಸುಮಾರು 3 ಸಾವಿರ ಎಕರೆ ಭತ್ತದ ಫಸಲು ನೀರಿನಲ್ಲಿ ಮುಳುಗಿದ್ದು ರೈತರು ತೀವ್ರ ಸಂಕಷ್ಟ ಎದುರಿಸುವಂತೆ ಆಗಿದೆ.

ADVERTISEMENT

ಕೊಚ್ಚಿಹೋದ ರಸ್ತೆ: ಪ್ರತಿವರ್ಷ ಬೀಸನಗದ್ದೆ ಗ್ರಾಮ ಜಲದಿಗ್ಭಂಧನಕ್ಕೆ ಒಳಗಾಗುತ್ತಿರುವ ಕಾರಣ ಗ್ರಾಮಸ್ಥರ ಮನವಿ ಮೇರೆಗೆ ಶಾಸಕ ಕುಮಾರ ಬಂಗಾರಪ್ಪ ₹1 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ತಡಗಳಲೆಯಿಂದ ಬೀಸನಗದ್ದೆವರೆಗೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ಸುಮಾರು ಒಂದು ಕಿ.ಮೀ.ನಷ್ಟು ರಸ್ತೆ ನಿರ್ಮಾಣ ಮಾಡಿ ಎರಡು ಕಡೆ ತಡೆಗೋಡೆ ನಿರ್ಮಿಸಲಾಗಿತ್ತು. ಪ್ರವಾಹದ ರಭಸಕ್ಕೆ ರಸ್ತೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಬೀಸನಗದ್ದೆ ಗ್ರಾಮಕ್ಕೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.