ಭದ್ರಾ ಜಲಾಶಯ
ಶಿವಮೊಗ್ಗ: ಪ್ರಾದೇಶಿಕ ಆಯುಕ್ತರ ಆದೇಶದಂತೆ ತುಂಗಭದ್ರಾ ನದಿ ಪಾತ್ರದ ಹಳ್ಳಿ-ಪಟ್ಟಣಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನದಿಗೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಮಾರ್ಚ್ 29ರ ರಾತ್ರಿಯಿಂದ ಏಪ್ರಿಲ್ 6ರ ರಾತ್ರಿಯವರೆಗೆ 7 ದಿನಗಳ ಕಾಲ ನಿತ್ಯ 3 ಸಾವಿರ ಕ್ಯುಸೆಕ್ ಹಾಗೂ ಏಪ್ರಿಲ್ 6ರಂದು 2200 ಕ್ಯುಸೆಕ್ ನದಿಗೆ ಹರಿಸಲಾಗುವುದು. ಈ 8 ದಿನಗಳ ಅವಧಿಯಲ್ಲಿ ನದಿಗೆ 23,200 ಕ್ಯುಸೆಕ್ (2 ಟಿಎಂಸಿ ಅಡಿ) ನೀರು ಹರಿಸಲಾಗುತ್ತಿದೆ. ಈ ಅವಧಿಯಲ್ಲಿ ತುಂಗಭದ್ರಾ ನದಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ತೆಗೆಯುವಂತೆ ಕರ್ನಾಟಕ ನೀರಾವರಿ ನಿಗಮದ ಪ್ರಕಟಣೆ ತಿಳಿಸಿದೆ.
ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕಿರುವುದರಿಂದ ನದಿಗೆ ನೀರು ಹರಿಸುವುದು ಅನಿವಾರ್ಯ ಎಂದು ಭದ್ರಾ ಜಲಾಶಯದ ನಿರ್ವಹಣೆ ಹೊಣೆ ಹೊತ್ತಿರುವ ಕರ್ನಾಟಕ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.