ADVERTISEMENT

ಹದಗೆಟ್ಟ ಭದ್ರಾವತಿ ರಸ್ತೆಗಳು; ಪ್ರಯಾಣಿಕರ ಗೋಳು

ಭದ್ರಾವತಿ: ನಗರಸಭೆ ವಿರುದ್ಧ ವಾಹನ ಸವಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:26 IST
Last Updated 31 ಜುಲೈ 2025, 7:26 IST
ಭದ್ರಾವತಿ ನಗರದ ಕಡದಕಟ್ಟೆ ರಸ್ತೆಯಲ್ಲಿ ಜಲ್ಲಿಗಳು ಎದ್ದಿರುವುದು
ಭದ್ರಾವತಿ ನಗರದ ಕಡದಕಟ್ಟೆ ರಸ್ತೆಯಲ್ಲಿ ಜಲ್ಲಿಗಳು ಎದ್ದಿರುವುದು   

ಭದ್ರಾವತಿ: ನಗರದ ಮುಖ್ಯರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಎಲ್ಲಿ ನೋಡಿದರೂ ಗುಂಡಿಗಳು, ತಗ್ಗು-ದಿನ್ನೆಗಳೇ ಕಾಣುತ್ತಿವೆ. ಕೆಲವೆಡೆ ದೊಡ್ಡ ಹೊಂಡಗಳೇ ನಿರ್ಮಾಣವಾಗಿದ್ದು, ವಾಹನ ಸವಾರರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಮುಖ್ಯ ಬಸ್ ನಿಲ್ದಾಣ, ಅಂಡರ್ ಬ್ರಿಡ್ಜ್, ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ, ಶಿವಮೊಗ್ಗ ಮಾರ್ಗದ ಹಳೆಯ ಸೇತುವೆ ರಸ್ತೆ, ಐ.ಟಿ.ಐ ರಸ್ತೆ, ಚೆನ್ನಗಿರಿ ರಸ್ತೆ, ಕಡದಕಟ್ಟೆ ರಸ್ತೆ ಹಾಗೂ ಈಚೆಗೆ ಲೋಕಾರ್ಪಣೆಗೊಂಡಿರುವ ಕಡದಕಟ್ಟೆ ಬಳಿಯ ನೂತನ ಫ್ಲೈ ಓವರ್‌ನಲ್ಲೂ ಗುಂಡಿಗಳು ನಿರ್ಮಾಣವಾಗಿವೆ.

ಕಡದಕಟ್ಟೆ ರಸ್ತೆ ಮೂಲಕ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ, ಐ.ಟಿ.ಐ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು, 1ರಿಂದ 2 ಕಿಲೋಮೀಟರ್‌ನಷ್ಟು ಅಂತರದ ರಸ್ತೆಯಂತೂ ಸಂಪೂರ್ಣವಾಗಿ ಹಾಳಾಗಿದೆ.

ADVERTISEMENT

ಈ ರಸ್ತೆಗಳಲ್ಲಿ ಸಂಚರಿಸಲು ಬರೋಬ್ಬರಿ ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿದೆ. ರಸ್ತೆಗೆ ಹಾಕಿದ್ದ ಜಲ್ಲಿಕಲ್ಲುಗಳು ಮೇಲೆದ್ದು ಬಂದಿದ್ದು, ಪ್ರಯಾಣಿಕರು ಹಗಲು ಹೊತ್ತಿನಲ್ಲೇ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನು ರಾತ್ರಿ ವೇಳೆ ಓಡಾಡುವವರ ಕಷ್ಟ ಹೇಳತೀರದು. 

ತೇಪೆ ಕಾರ್ಯ:

ಪ್ರತಿ ವರ್ಷ ಮಳೆ ಸುರಿದಾಗ ನಗರದ ಮುಖ್ಯ ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ತೆರೆದುಕೊಳ್ಳುತ್ತವೆ. ಲಕ್ಷಾಂತರ ವೆಚ್ಚ ಮಾಡಿ ತೇಪೆ ಹಾಕುವ ಕಾರ್ಯ ಕೈಗೊಳ್ಳಲಾಗುತ್ತದೆ. ಆದರೆ, ಈ ತಾತ್ಕಾಲಿಕ ಕಾಮಗಾರಿಯಿಂದ ರಸ್ತೆಗಳು 6 ತಿಂಗಳೂ ಸುಸ್ಥಿತಿಯಲ್ಲಿರುವುದಿಲ್ಲ. ಪ್ರತಿ ಮಳೆಗಾಲದಲ್ಲಿ ಎದುರಾಗುವ ರಸ್ತೆ ದುರವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.